ನವದೆಹಲಿ:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು, ದೆಹಲಿ ಸೇವಾ ಮಸೂದೆ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ‘ದಿಲ್ಲಿಯ 2 ಕೋಟಿ ಜನರ ಪರವಾಗಿ’ ಕೃತಜ್ಞತೆ ಸಲ್ಲಿಸಿದ್ದಾರೆ.
ದೆಹಲಿಯ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಅಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿದ ‘ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ 2023’ ಅನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ. ಇತ್ತ ರಾಜ್ಯಸಭೆಯಲ್ಲಿಯೂ 131 – 102 ಮತಗಳಿಂದ ಅಂಗೀಕಾರಗೊಂಡಿತು.
‘ಜಿಎನ್‌ಸಿಟಿಡಿ (ತಿದ್ದುಪಡಿ) ಮಸೂದೆ, 2023 ಅನ್ನು ತಿರಸ್ಕರಿಸಲು ಮತ್ತು ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಲು ನಿಮ್ಮ ಪಕ್ಷ ನೀಡಿದ ಬೆಂಬಲಕ್ಕಾಗಿ ದೆಹಲಿಯ 2 ಕೋಟಿ ಜನರ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.