ತುಮಕೂರು:
ಮಹಿಳೆಯರ ಮೇಲೆ ಎದುರಾಗುತ್ತಿರುವ ನಾನಾ ರೀತಿಯ ದೌರ್ಜನ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ನೊಂದವರಿಗೆ ಈ ಯೋಜನೆಗಳ ಫಲ ಲಭ್ಯವಾಗಬೇಕು ಎಂದು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಭರತ್ ಕುಮಾರ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ-ತುಮಕೂರು ಗ್ರಾಮಾಂತರ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ತುಮಕೂರು ಗ್ರಾಮಾಂತರ ಸಿಡಿಪಿಒ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗೆಳತಿ ವಿಶೇಷ ಚಿಕಿತ್ಸಾ ಘಟಕದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒಂದೇ ಸೂರಿನಡಿ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಬಂದಿರುವುದು ತುಂಬಾ ಉತ್ತಮವಾಗಿರುವ ಬೆಳವಣಿಗೆ. ಆ ಮೂಲಕ ದೌರ್ಜನ್ಯಗಳು ಕಡಿಮೆಯಾಗುವ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾಮಟ್ಟದಲ್ಲಿ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ತಾಲ್ಲೂಕು ಮಟ್ಟದಲ್ಲಿ ಅಲ್ಲಿನ ಆಸ್ಪತ್ರೆಗಳಲ್ಲಿ ಗೆಳತಿ ವಿಶೇಷ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದೆ. ದೌರ್ಜನ್ಯಕ್ಕೊಳಪಟ್ಟು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಅಲ್ಲಿಯೇ ಚಿಕಿತ್ಸೆಯ ಜೊತೆಗೆ ಕಾನೂನು ಸಲಹೆ, ನೆರವು ಪೊಲೀಸ್ ವ್ಯವಸ್ಥೆ ಮೊದಲಾದ ವ್ಯವಸ್ಥೆಗಳನ್ನು ಈ ಘಟಕಗಳಲ್ಲಿ ಮಾಡಲಾಗುತ್ತಿದೆ ಎಂದರು.
ಸರ್ಕಾರಗಳು ನೊಂದವರ ಪರವಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರುತ್ತಿದೆ. ದೌರ್ಜನ್ಯಗಳು ಕಡಿಮೆಯಾಗುವಂತಹ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಬೇಕು. ಅಂತಹ ಮನಸ್ಥಿತಿ ಎಲ್ಲರಲ್ಲೂ ಮೂಡಬೇಕು. ಆಗ ಮಾತ್ರ ಒಂದು ಉತ್ತಮ ಸಮಾಜ ನೋಡಲು ಸಾಧ್ಯ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ಮುಖ್ಯ ಅತಿಥಿಗಳಾಗಿ ಮಾತನಾಡಿ ದೌರ್ಜನ್ಯ ಮಾಡುವ ಆರೋಪಿಗಳಿಗೆ ಶಿಕ್ಷೆಯಾಗಲೇಬೇಕೆಂದು ನಾವೆಲ್ಲ ಕಾನೂನು ಅರಿವನ್ನು ಮೂಡಿಸುತ್ತಾ ಬರುತ್ತಿದ್ದೇವೆ. ನೊಂದವರಿಗೆ ನ್ಯಾಯಾಲಯದ ಮೂಲಕ ಪರಿಹಾರ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸಂತ್ರಸ್ತರ ಪರಿಹಾರ ನಿಧಿ ಇರುತ್ತದೆ. ಆರೋಪಿಗಳಿಗೆ ಹಾಕಲಾಗುವ ದಂಡದ ಹಣದಲ್ಲಿ ನೊಂದವರಿಗೆ ಪರಿಹಾರ ನೀಡಲು ಅವಕಾಶಗಳಿವೆ. ಇದರ ಜೊತೆಗೆ ಸರ್ಕಾರಗಳೂ ಸಹ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಪರಿಹಾರ ನೀಡುತ್ತದೆ. ಅತ್ಯಾಚಾರ ಮತ್ತು ಆಸಿಡ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಮಾತನಾಡಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿದ್ದು, ಆಸ್ಪತ್ರೆಯ ವತಿಯಿಂದ ಕೊಠಡಿಗಳನ್ನು ಈ ಘಟಕಕ್ಕೆ ನೀಡಲಾಗಿದೆ. ಪ್ರಕರಣಗಳಲ್ಲಿ ವಿಶೇಷ ಗಮನ ಹರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ ಮಾತನಾಡಿ ಎಲ್ಲ ಪ್ರಕರಣಗಳಲ್ಲಿಯೂ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಸಾಧ್ಯವಾಗುವುದಿಲ್ಲ. ದೌರ್ಜನ್ಯಕ್ಕೊಳಪಟ್ಟ ಎಷ್ಟೋ ಮಹಿಳೆಯರು ಸಾಂತ್ವನ ಕೇಂದ್ರ, ಸೇರಿದಂತೆ ವಿವಿಧ ಸಂಸ್ಥೆಗಳ ನೆರವು ಪಡೆಯುತ್ತಾರೆ. ಕಾನೂನು ಸೇವಾ ಪ್ರಾಧಿಕಾರಗಳ ಮೊರೆ ಹೋಗುತ್ತಾರೆ. ಅನಿವಾರ್ಯ ಪರಿಸ್ಥಿತಿ ಉಂಟಾದಾಗ ಮಾತ್ರ ಪೊಲೀಸ್ ಮತ್ತು ಕೋರ್ಟ್ ಮೆಟ್ಟಿಲು ಏರುತ್ತಾರೆ. ದೌರ್ಜನ್ಯಕ್ಕೊಳಪಟ್ಟವರಿಗೆ ವಿವಿಧ ರೀತಿಯ ಯೋಜನೆಗಳು ಮತ್ತು ಕಾನೂನುಗಳು ಬರುತ್ತಿದ್ದು, ಸಂತ್ರಸ್ತರಿಗೆ ಇವು ನೆರವಾಗಲಿ ಎಂದು ಆಶಿಸಿದರು.
ಜಿಲ್ಲಾ ಆರ್.ಸಿ.ಎಚ್. ವೈದ್ಯಾಧಿಕಾರಿ ಡಾ.ಕೇಶವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕಾ, ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಧರ್ ಎನ್.ಎಸ್. ಅವರುಗಳು ಮಾತನಾಡಿದರು.