ವಿಜಯವಾಡ:
ಮಕ್ಕಳನ್ನು ಸುಮ್ಮನೇ ಇರಿಸುವುದು ಅಂದರೆ ಅದು ಸವಾಲಿನ ಕೆಲಸ. ನಾವು ಏನೇ ಹೇಳಿದರೂ ಅವರು ಕೇಳುವುದಿಲ್ಲ. ಮಕ್ಕಳಿಗೆ ಅಪಾಯಗಳ ಬಗ್ಗೆ ಅರಿವಿಲ್ಲದಿರುವುದರಿಂದ ಯಾವಾಗಲೂ ನಾವು ಅವರ ಮೇಲೆ ನಿಗಾ ಇಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯದಲ್ಲಿ ಸಿಲುಕಿಕೊಳ್ಳುತ್ತಾರೆ.
ಇತ್ತೀಚೆಗಷ್ಟೇ ಪುಟ್ಟ ಬಾಲಕಿಯೊಬ್ಬಳು ಇದೇ ರೀತಿಯ ಅಪಾಯಕ್ಕೆ ಸಿಲುಕ್ಕಿದ್ದಳು. ಅದೃಷ್ಟವಶಾತ್ ಬಾಲಕಿಗೆ ಏನೂ ಆಗಿಲ್ಲ.
ಮನೆಯ ಬಳಿ ಆಟವಾಡುತ್ತಿದ್ದ ಮಗು ಎರಡು ಮನೆಗಳ ನಡುವಿನ ಗೋಡೆ ಸಂದಿಯಲ್ಲಿ ಸಿಲುಕಿಕೊಂಡಿತು. ಅರ್ಧ ಅಡಿ ಅಗಲವೂ ಇಲ್ಲದ ಸಂದಿಗೆ ನುಗ್ಗಿ ಹೊರಬರಲಾಗದೆ ಗಂಟೆಗಟ್ಟಲೆ ನರಕಯಾತನೆ ಅನುಭವಿಸಿದಳು. ಕೊನೆಗೆ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಆವುಳ ತಿಪ್ಪಾಯಪಲ್ಲಿ ಗ್ರಾಮದ ಏಳು ವರ್ಷದ ಬಾಲಕಿ ಆವಂತಿಕಾ ಆಟವಾಡುತ್ತಿದ್ದ ವೇಳೆ ಎರಡು ಮನೆಗಳ ನಡುವಿನ ಇಕ್ಕಟಾದ ಸಂದಿಯಲ್ಲಿ ಸಿಲುಕಿಕೊಂಡಿದ್ದಳು. ಅದರಿಂದ ಹೊರಬರಲು ಎಲ್ಲ ಪ್ರಯತ್ನ ಮಾಡಿದಳು. ಆದರೆ ಅದು ಸಾಧ್ಯವಾಗಲಿಲ್ಲ. ಪೋಷಕರು ಮತ್ತು ಗ್ರಾಮಸ್ಥರು ಸಹ ಬಾಲಕಿಯನ್ನು ಹೊರತರಲು ಪ್ರಯತ್ನಿಸಿದರು. ಆದರೆ ಅವರಿಂದಲೂ ಆಗಲಿಲ್ಲ.
ಕೊನೆಗೆ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಂಟೆಗಟ್ಟಲೆ ಕೆಲಸ ಮಾಡಿ ಕೊನೆಗೂ ಪೊಲೀಸರು ಒಂದು ಕಡೆ ಮನೆಯ ಗೋಡೆ ಒಡೆದು ಪುಟ್ಟ ಬಾಲಕಿ ಆವಂತಿಕಾಳನ್ನು ರಕ್ಷಿಸಿದ್ದಾರೆ.
ಬಾಲಕಿ ಪ್ರಾಣಾಪಾಯದಿಂದ ಪಾರಾಗುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ಜಿಲ್ಲಾ ಎಸ್ಪಿ ಅಮಿತ್ ಬರ್ದಾರ್ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ