ಚಿತ್ರದುರ್ಗ
ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಅದಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾದೇವಪ್ಪ ನಿನಗೂ ಫ್ರೀ, ನನ್ ಹೆಂಡ್ತಿಗೂ ಫ್ರೀ ಅಂದಿದ್ದರು. ಈಗ ನನ್ ಹೆಂಡ್ತಿನೂ ಡಕೋಟಾ ಗಾಡಿ, ನಿನ್ ಹೆಂಡ್ತಿನೂ ಡಕೋಟಾ ಗಾಡಿ ಎಂದು ವ್ಯಂಗ್ಯವಾಡಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪಾಸ್ ಘೋಷಣೆಯಾಗಿದೆ ಆದರೆ ರಾಜ್ಯದ ಮಹಿಳೆಯರು ಎಸಿ, ಡಿಲಕ್ಸ್ ಬಸ್ ಏರುವಂತಿಲ್ಲ, ಇದು ಕಾಂಗ್ರೆಸ್ ಸರ್ಕಾರದಿಂದ ನಯವಂಚನೆಯ ಗ್ಯಾರಂಟಿಯಾಗಿದೆ. ಪಂಚ ಗ್ಯಾರಂಟಿ ಘೋಷಣೆಯಲ್ಲಿ ಸ್ಪಷ್ಟತೆ ಇಲ್ಲ, ಈ ಸಾಲಿನ ಪದವೀಧರರಿಗೆ ಮಾತ್ರ ಯುವನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಡಕೋಟಾ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಸಂಚಾರ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದರು.
ಇನ್ನು ಉಚಿತ ವಿದ್ಯುತ್ ಯೋಜನೆಯಲ್ಲೂ ಗೊಂದಲಗಳಿವೆ. ಗ್ಯಾರಂಟಿ ಯೋಜನೆ ಬಗ್ಗೆ ಜನ ಬೀದಿಗಿಳಿಯುವ ದಿನ ದೂರವಿಲ್ಲ ಎಂದು ಹೇಳುವ ಮೂಲಕ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಪರೋಕ್ಷವಾಗಿ ಕುಟುಕಿದರು.
ಉಚಿತ ಬಸ್ ಪ್ರಯಾಣ ಯೋಜನೆ ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೂ ವಿಸ್ತರಿಸುವಂತೆ ಆಗ್ರಹ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮಾಸ್ಟರ್ ಪ್ಲಾನ್ ರೂಪಿಸಿ-ಎ ನಾರಾಯಣಸ್ವಾಮಿ ಜನರು ಹಾಗೂ ಜನಪ್ರತಿನಿಧಿಗಳ ಹೋರಾಟದ ಪ್ರತಿಫಲವಾಗಿ ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಭವಿಷ್ಯದ ದೃಷ್ಟಿಯಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮಾಸ್ಟರ್ ಪ್ಲಾನ್ ರೂಪಿಸಬೇಕು.
ಕೇವಲ 17 ಎಕರೆ ಜಾಗದಲ್ಲಿ ಕಾಲೇಜು ಸ್ಥಾಪನೆಯ ಯೋಜನೆ ಬದಲಿಗೆ, 65 ರಿಂದ 70 ಎಕರೆ ಜಾಗದಲ್ಲಿ ವಿಶಾಲ ಹಾಗೂ ಸುಸಜ್ಜಿತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಮೆಡಿಕಲ್ ಕಾಲೇಜು ಆರಂಭಿಸುವ ಕುರಿತು ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮೆಡಿಕಲ್ ಕಾಲೇಜು ಆರಂಭಿಸಲು ಸೂಕ್ತ ಕಟ್ಟಡ ಹಾಗೂ ಸ್ಥಳ ನಿಗದಿ ಮಾಡುವ ಕುರಿತು ಇನ್ನೊಮ್ಮೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ ವಾರದಲ್ಲಿ ವರದಿ ನೀಡಬೇಕು ಎಂದರು. ಚಿತ್ರದುರ್ಗ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಈಗಾಗಲೇ ವಿದ್ಯಾರ್ಥಿಗಳು ಓದುತ್ತಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದ ಮೇಲೆ ಸವಾರಿ ಮಾಡಿ ಬಲವಂತದಿಂದ ಸ್ನಾತಕೋತ್ತರ ಕೇಂದ್ರವನ್ನು ಸ್ವಾಧೀನ ಪಡಿಸಿಕೊಳ್ಳುವುದು ಸಾಧ್ಯವಿಲ್ಲ. ವಿ.ವಿ ಉಪಕುಲಪತಿಗಳು ಸಂಪೂರ್ಣ ಒಪ್ಪಿ ಸ್ಥಳ ನೀಡಿದರೆ ಯಾವುದೇ ಅಭ್ಯಂತರವಿಲ್ಲ. ಮುಂದಿನ ಸಭೆಗೆ ಕಡ್ಡಾಯವಾಗಿ ದಾವಣಗೆರೆ ವಿ.ವಿ ಅಧಿಕಾರಿಗಳು ಹಾಜರಿಬೇಕು ಎಂದು ಸೂಚನೆ ನೀಡಿದರು.
111 ಎಕರೆ ಸರ್ಕಾರಿ ಜಮೀನು ಚಿತ್ರದುರ್ಗ ನಗರಸಭೆಯ ವ್ಯಾಪ್ತಿಗೆ ಹತ್ತಿರ ಇರುವ ಇಂಗಳದಾಳು ಗ್ರಾಮದ ಬಳಿ 111 ಎಕರೆ ಸರ್ಕಾರಿ ಜಮೀನು ಲಭ್ಯವಿದೆ. ಇದರಲ್ಲಿ 80 ಎಕರೆ ಜಮೀನಿಗೆ ಮಂಜೂರಾತಿಗೆ 57 ಅರ್ಜಿಗಳು ಬಂದಿವೆ. 30 ಎಕರೆ ಜಮೀನು ಪ್ರದೇಶದಲ್ಲಿ ನಾಲ್ಕು ಗುಡ್ಡಗಳು ಇವೆ ಎಂದು ಉಪವಿಭಾಗಧಿಕಾರಿ ಆರ್.ಚಂದ್ರಯ್ಯ ಸಭೆಗೆ ಮಾಹಿತಿ ನೀಡಿದರು. ಈ ಸರ್ಕಾರಿ ಜಮೀನಿನಲ್ಲಿ ಯಾವ ಖಾಸಗಿ ವ್ಯಕ್ತಿಗಳು ಉಳಿಮೆ ಮಾಡುತ್ತಿಲ್ಲ. ಜಮೀನು ಮಂಜೂರಾತಿಗೆ ಬಂದ ಅರ್ಜಿಗಳನ್ನು ವಜಾ ಮಾಡಿ ಈ ಸ್ಥಳ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸೂಕ್ತವಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ