ಜಗಳೂರು ತಾಲ್ಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ-ಶಾಸಕ ಎಸ್.ವಿ.ರಾಮಚಂದ್ರ

ಜಗಳೂರು :

              ನೂರು ವರ್ಷದಲ್ಲಿ 70 ವಷ್ದಲ್ಲಿ ಬರಗಾಲ, 30 ವರ್ಷ ಬೀಕರ ಬರಗಾಲ ಹೊಂದಿರುವ ಜಗಳೂರು ತಾಲ್ಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಸರ್ಕಾರ ಘೋಷಣೆ ಮಾಡದೇ, ನೀರಾರಿ ಪ್ರದೇಶ ಹರಿಹರ ತಾಲ್ಲೂಕನ್ನು ಮೊದಲ ಪಟ್ಟಿಯಲ್ಲಿ ಬರಪೀಡಿತ ಹೆಸರು ಘೋಷಣೆ ಮಾಡುವ ಮೂಲಕ ಸರ್ಕಾರ ತಾರತಮ್ಯ ಮಾಡಿದ್ದು ಸರಿಯಲ್ಲ. ಕೂಡಲೇ ಜಗಳೂರು ತಾಲ್ಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಶಾಸಕ ಎಸ್.ವಿ.ರಾಮಚಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ 130ನೇ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
                ಸಾಮಾಜಿಕ ಬದಲಾವಣೆ ಮತ್ತು ದೇಶದ ಪ್ರಗತಿಯಲ್ಲಿ ಶಿಕ್ಷಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಇದೆ. ಅವರ ಮುಂದೆ ಹೆಚ್ಚಿನ ಸಮಸ್ಯೆ, ಸವಾಲುಗಳಿವೆ. ಇಂತಹ ಜವಾಬ್ದಾರಿಯನ್ನು ನಿರ್ವಹಿಸಿ ಸಮಸ್ಯೆ ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಶಿಕ್ಷಕರು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಮುಖಾಮುಖಿಯಾಗಬೇಕು ಎಂದು ಹೇಳಿದರು.
                   ಪಕ್ಷ ಬಿಡುವುದಿಲ್ಲ:- ಕೆಲವು ದಿನಗಳಿಂದ ಕ್ಷೇತ್ರದಲ್ಲಿ ರಾಮಚಂದ್ರ ಪಕ್ಷ ಬಿಡುತ್ತಾನೆ ಎಂದು ಸುಳ್ಳು ಸುದ್ದಿಗಳು ಹರಡುತ್ತಿದ್ದು, ನಾನು ಯಾವುದೇ ಕಾರಣಕ್ಕೂ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಸಿದ್ದೇಶ್ವರ್ ಅವರನ್ನು ಬಿಟ್ಟು ಹೋಗುವುದಿಲ್ಲ, ನಮ್ಮ ಪಕ್ಷ ಭದ್ರವಾಗಿದೆ. ನಾವು 104 ಜನ ಶಾಸಕರಿದ್ದು ಒಗ್ಗಟ್ಟಿನಲ್ಲಿಯೇ ಇದ್ದೇವೆ. ನಮ್ಮ ಸರ್ಕಾರ ಇಲ್ಲದರಿದ್ದರೂ ತಾಲೂಕಿನ ಅಭಿವೃದ್ದಿಗೆ ಹೋರಾಟ ಮಾಡಿಯಾದರೂ ಅನುದಾನ ತರುತ್ತೇನೆ ಎಂದರು.
              ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಲು ಅವರ ಮೇಲಿನ ಹೊರೆಯನ್ನು ಕಡಿಮೆಮಾಡಬೇಕಾಗಿದೆ ಎಂದರು. ರಾಜ್ಯದಲ್ಲಿ 3.50 ಲಕ್ಷ ಶಿಕ್ಷಕರಿದ್ದು, ಶಿಕ್ಷಕರಿಗೆ ಸರಿಸಾಟಿಯಾದ ಹುದ್ದೆ ಬೇರೆ ಯಾವುದು ಇಲ್ಲ. ಶಿಕ್ಷಕರ ಪ್ರಶಸ್ತಿಗೆ ಅರ್ಜಿ ಆಹ್ವಾನ ನೀಡುವುದನ್ನು ರದ್ದು ಮಾಡಿ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುವಂತಾಗಬೇಕು. ಕರ್ನಾಟಕದಲ್ಲಿ ಪೊಲೀಸ್ ಠಾಣೆ, ಜೈಲ್, ಮಂದಿರ, ಮಸೀದಿಗಳಿಂತ ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನು ತೆರೆಯಬೇಕು. ತಾಲೂಕಿನಲ್ಲಿ ನಡೆಯುತ್ತಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕಿಂತಲೂ ಉತ್ತಮವಾಗಿ ಆಯೋಜನೆ ಮಾಡಿದ್ದೀರಿ ಎಂದು ಶ್ಲಾಘಿಸಿದರು.
                    ಕಾರ್ಯಕ್ರಮದಲ್ಲಿ ಅ.ಭಾ.ಪ್ರಾ.ಶಾ.ಶಿ ಉಪಾಧ್ಯಕ್ಷ ಬಸವರಾಜ್ ಗುರಿಕಾರ ಅವರು ಉಪನ್ಯಾಸ ನೀಡಿದರು.ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಪ್ರಶಸ್ತಿಗಳಿಸಿ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ರಶ್ಮೀರಾಜಪ್ಪ, ಸದಸ್ಯರಾದ ಎಸ್.ಕೆ.ಮಂಜುನಾಥ್, ಶಾಂತಕುಮಾರಿ, ಸಿದ್ದಪ್ಪ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಎಪಿಎಂಸಿ ಅಧ್ಯಕ್ಷ ಎನ್.ಎಸ್.ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಚಂದ್ರ, ಸಮನ್ವಯಾಧಿಕಾರಿ ಗಿರೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆನಂದಪ್ಪ, ಗೌರವಾಧ್ಯಕ್ಷ ಇ.ಸತೀಶ್, ಕಾರ್ಯದರ್ಶಿ ಲಕ್ಷ್ಮೀಕಾಂತ್, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಡಿ.ಹಾಲಪ್ಪ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಯಶೀಲರೆಡ್ಡಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ನಾಗರಾಜ್, ಸೇರಿದಂತೆ ತಾಲೂಕು ಪಂಚಾಯ್ತಿ ಸದಸ್ಯರು, ನೂತನ ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ಶಿಕ್ಷಕರು ಹಾಜರಿದ್ದರು.