ಹಿರಿಯೂರು :
ಶಿಕ್ಷಕ ವೃತ್ತಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟು, ಆದರ್ಶ ಶಿಕ್ಷಕರಾಗಿ ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಉನ್ನತ ಗೌರವಾನ್ವಿತ ಸ್ಥಾನವನ್ನು ತಂದುಕೊಟ್ಟ ಡಾ|| ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜೀವನವೇ ಒಂದು ಮಹಾಕೃತಿಯಾಗಿ ಅವರ ಆದರ್ಶಗಳು ಶಿಕ್ಷಕ ಸಮುದಾಯಕ್ಕೆ ದಾರಿದೀಪವಾಗಿವೆ ಎಂದು ಹಿರಿಯೂರು ತೋಟಗಾರಿಕೆ ಕಾಲೇಜಿನ ವಿಶ್ರಾಂತ ಡೀನ್ ಕೃಷಿ ವಿಜ್ಞಾನಿ ಡಾ|| ಬಿ. ಮಹಂತೇಶ್ ಹೇಳಿದರು.
ಹಿರಿಯೂರು ನಗರದ ಗಂಗಾ ಸೆಂಟ್ರಲ್ ಶಾಲೆಯಲ್ಲಿ ಗಂಗಾ ಸೆಂಟ್ರಲ್ ಶಾಲೆ ಮತ್ತು ಹಿರಿಯೂರು ನಗರದ ಇನ್ನರ್ ವೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದ ಅಳಿವು-ಉಳಿವು ನಮ್ಮ ಶಿಕ್ಷಕರ ಸೇವಾ ಮನೋಭಾವದ ಮೇಲೆ ನಿಂತಿದೆ. ಶಿಕ್ಷಕರ ವೃತ್ತಿಯು ಸಂಬಳಕ್ಕಾಗಿ ಮಾಡುವ ಕೆಲಸವೇ ಆದರೂ ಸಹ ಇದರಲ್ಲಿ ಭವ್ಯ ಭಾರತವನ್ನು ಕಟ್ಟುವ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂಬ ಅಂಶವನ್ನು ಶಿಕ್ಷಕರು ಮನಗಾಣಬೇಕು. ತಂದೆ-ತಾಯಿಗಳ ಮಕ್ಕಳ ಸಂಬಂಧವು ಭಾವನಾತ್ಮಕ, ವ್ಯಾಮೋಹಭರಿತವಾದ ಸಂಬಂಧ, ಆದರೆ ಗುರು-ಶಿಷ್ಯರ ಸಂಬಂಧವು ಭಾವನಾತೀತವಾದ, ವ್ಯಾಮೋಹರಹಿತವಾದ, ಪವಿತ್ರವಾದ, ಶ್ರೇಷ್ಠವಾದ ಸಂಬಂಧ ಎಂದು ಹೇಳಿದ ಅವರು ವಿದ್ಯಾರ್ಥಿಗಳನ್ನು ಭವಿಷ್ಯದ ಜವಾಬ್ದಾರಿಯುತ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಪರಿಶ್ರಮಕ್ಕೆ ಯಾವ ಪುರಸ್ಕಾರವೂ, ಗುರು ಕಾಣಿಕೆಯೂ ಸರಿಸಾಟಿಯಾಗಲಾರದು, ಒಂದು ರೀತಿಯಲ್ಲಿ ಅದು “ಸರಿಸಾಟಿಯಿಲ್ಲದ ಪರಿಶ್ರಮ” ಎಂದು ಡಾ|| ಬಿ.ಮಹಂತೇಶ್ ಹೇಳಿದರು.
ಹಿರಿಯೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಸಪ್ನಾ ಸತೀಶ್ ಮಾತನಾಡುತ್ತ, ಮಾತೃ ದೇವೋಭವ, ಪಿತೃ ದೇವೋಭವ, ಗುರು ದೇವೋಭವ ಎಂದು ಜಗತ್ತಿಗೆ ಸಾರಿದ ಸನಾತನ ಸಂಸ್ಕøತಿ ನಮ್ಮದು. ಹೀಗಾಗಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ (ಮುಕ್ತಿ) ಎಂಬುದಾಗಿ ಪುರಂದರದಾಸರು ಹೇಳಿರುವಂತೆ ವಿದ್ಯಾರ್ಥಿಗಳು ಗುರುಗಳಿಗೆ ವಿಧೇಯರಾಗಿ ಅವರ ಮಾರ್ಗದರ್ಶನ ಪಡೆದು, ಆಸಕ್ತಿ, ಶ್ರದ್ಧೆ, ಸತತ ಪರಿಶ್ರಮ ಇವುಗಳ ಮೂಲಕ ವಿದ್ಯಾರ್ಜನೆ ಮಾಡಿ ಉನ್ನತ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗಾ ಸೆಂಟ್ರಲ್ ಶಾಲೆಯ ಅಧ್ಯಕ್ಷ ಶ್ರೀ ಓಬಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗಂಗಾ ಸೆಂಟ್ರಲ್ ಶಾಲೆಯ ಆಡಳಿತಾಧಿಕಾರಿ ಕೆ.ಪ್ರಹ್ಲಾದ್‍ರಾವ್, ಪ್ರಾಚಾರ್ಯೆ ಶ್ರೀಮತಿ ಶೈಲಜಾ, ಸಿದ್ದಗಂಗಮ್ಮ, ಇನ್ನರ್ ವೀಲ್ ಕ್ಲಬ್‍ನ ರಚನಾ, ಸ್ವರ್ಣಲತಾ, ಗೀತಾ, ಪದ್ಮಜಾ, ಸೌಮ್ಯ ಹಾಗೂ ಶಾಲೆಯ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಜಾಹ್ನವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಸಂಜಯ್ ಸ್ವಾಗತಿಸಿದರು, ಮಧುಮಿತ ವಂದಿಸಿದರು, ಪ್ರೇಮ್ ಮತ್ತು ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು.