ಬೆಂಗಳೂರು:
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಸ್ರೋ ಸಂಸ್ಥೆಗೆ ಬುಧವಾರ ಸಂಜೆ ಭೇಟಿ ನೀಡಿ ಸಂಸ್ಥೆ ಮುಖ್ಯಸ್ಥ ಎಸ್. ಸೋಮನಾಥ್ ಹಾಗೂ ಅವರ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಇಸ್ರೋ ಅಧ್ಯಕ್ಷ ಸೋಮನಾಥ್, ಯು ಆರ್ ರಾವ್ ಬಾಹ್ಯಕಾಶ ಕೇಂದ್ರದ ನಿರ್ದೇಶಕ ಶಂಕರನ್, ಯೋಜನೆ ನಿರ್ದೇಶಕ ವೀರಮುತ್ತು, ಸಹಾಯಕ ಯೋಜನೆ ನಿರ್ದೇಶಕಿ ಕಲ್ಪನಾ, ಯಂತ್ರ ನಿರ್ವಹಣೆ ನಿರ್ದೇಶಕ ಶ್ರೀಕಾಂತ್ ಮತ್ತಿತರ ವಿಜ್ಞಾನಿಗಳನ್ನು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಡಿ ಕೆ ಶಿವಕುಮಾರ್ ಅವರು ತುಂಬು ಹೃದಯದಿಂದ ಅಭಿನಂದಿಸಿದರು.
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ ನಿಮ್ಮ ಸಾಧನೆ ಶ್ಲಾಘನೀಯ. ನೀವು ಭಾರತದ ಹೆಮ್ಮೆ ಎಂದು ಡಿ ಕೆ ಶಿವಕುಮಾರ್ ಕೊಂಡಾಡಿದರು. ಚಂದ್ರಯಾನ ಯೋಜನೆ ಬಗ್ಗೆ ಸಂಕ್ಷಿಪ್ತ ವಿವರ ಪಡೆದ ಶಿವಕುಮಾರ್ ಅವರು ವಿಜ್ಞಾನಿಗಳ ಸಾರ್ಥಕ ಸಂತಸದ ಕ್ಷಣಗಳಿಗೆ ಸಾಕ್ಷಿಯಾದರು. ಇಡೀ ದೇಶವೇ ನಿರೀಕ್ಷೆ ಹೊಂದಿದ್ದ ಚಂದ್ರಯಾನ 3 ಯೋಜನೆ ಯಶಸ್ವಿಯಾಗಿರುವ ಈ ಸಂದರ್ಭದಲ್ಲಿ ಯೋಜನೆಗಾಗಿ ಶ್ರಮಿಸಿದ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ಶ್ರಮ ಅವಿಸ್ಮರಣೀಯ ಎಂದರು.