ತಾಲ್ಲೂಕಿನ ರಾಜಕೀಯ ವಲಯದಲ್ಲಿ ಗರಿಗೆದರಿದ ಚಟುವಟಿಕೆಗಳು

ತುರುವೇಕೆರೆ:

        ಇದೇ 18 ರಂದು ನಡೆಯುವ ತುಮಕೂರು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ತಾಲ್ಲೂಕಿನ ರಾಜಕೀಯ ವಲಯ ಗರಿಗೆದರತೊಡಗಿದೆ. ಬಿಜೆಪಿಯಿಂದ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧಾ ಕಣದಲ್ಲಿದ್ದಾರೆ.

ಚುನಾವಣೆಗೆ ಸಿದ್ದತೆ:

       ಏ 18 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲೋಪವಾಗದಂತೆ ಪಾರದರ್ಶಕವಾಗಿ ಮಾಡಲು ಸಹಾಯಕ ಚುನಾವಣಾಧಿಕಾರಿ ಕೆ.ಶಶಿಧರ್ ಸಕಲ ಸಿದ್ದತೆ ಕೈಗೊಂಡಿದ್ದಾರೆ. ತಾಲೂಕಿನ ಗಡಿ ಭಾಗ ಬೀಮನ ಹಾರೆ ಹಾಗೂ ಮಾಯಸಂದ್ರ ಟಿ.ಬಿ ಕ್ರಾಸ್ ಬಳಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು 4 ಜನ ಸಿಬ್ಬಂದಿಗಳು 8 ಗಂಟೆಗಳಂತೆ ಮೂರು ತಂಡಗಳು 24 ಗಂಟೆ ಕಾರ್ಯ ನಿರ್ವಹಿಸುತ್ತಿವೆ.

ತಾಲ್ಲೂಕಿನ ಮತಗಟ್ಟೆಗಳು:

     ಕ್ಷೇತ್ರದಲ್ಲಿ ಒಟ್ಟು 226 ಮತಗಟ್ಟೆಗಳಿದ್ದು, 10 ಕ್ಕೂ ಹೆಚ್ಚು ಸೂಕ್ಷ್ಮ ಮತಗಟ್ಟೆಗಳನ್ನು ಗುರ್ತಿಸುವುದರೊಂದಿಗೆ ಸಿ.ಸಿ ಕ್ಯಾಮೆರ ಅಳವಡಿಸಿದೆ.

ಕ್ಷೇತ್ರದ ಮತದಾರರು:

     ಕ್ಷೇತ್ರದಲ್ಲಿ ಒಟ್ಟು 177988 ಮತದಾರರಿದ್ದು , 89446 ಪುರುಷರು, 88535 ಮಹಿಳೆಯರು ಹಾಗು 7 ಇತರೆ ಮತದಾರರು ತಾಲ್ಲೂಕಿನಲ್ಲಿದ್ದಾರೆ. ಹೊಸದಾಗಿ 1500 ಅರ್ಜಿಗಳಲ್ಲಿ 400 ಯುವ ಮತದಾರರು ಈಗಾಗಲೇ ನೂತನವಾಗಿ ಸೇರ್ಪಡೆಗೊಂಡಿದ್ದಾರೆ.
ರಾಜಕೀಯ: ಲೋಕಸಭಾ ಚುನಾವಣೆಗೆÉ ಜಿಲ್ಲಾ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದ ಜಿ.ಎಸ್ ಬಸವರಾಜು ಮತ್ತು ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷಗಳ ಹೊಂದಾಣಿಕೆ ಮೈತ್ರಿ ಪಕ್ಷದಿಂದ ಜೆಡಿಎಸ್ ನ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಣದಲ್ಲಿದ್ದಾರೆ.

       ಪ್ರಾರಂಭದಲ್ಲಿ ಹಾಲಿ ಕಾಂಗ್ರೆಸ್‍ನ ಎಲ್ಲಾ ಸಂಸದರಿಗೆ ಟಿಕೆಟ್ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದು ಅದರಂತೆ ಸಂಸದ ಎಸ್.ಪಿ. ಮುದ್ದಹನುಮೇಗೌಡರಿಗೂ ಸಹ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬ ಲೆಕ್ಕಚಾರದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಕೇಳಿಬಂದಿತ್ತು.

        ಆದರೆ ಕೊನೆ ಘಳಿಗೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತುಮಕೂರು ಜಿಲ್ಲೆಯಲ್ಲೇ ಸ್ಪರ್ಧಿಸಲು ಮುಂದಾದಾಗ ಗತ್ಯಂತರವಿಲ್ಲದೆ ಕೇಂದ್ರದ ಮೈತ್ರಿಸರ್ಕಾರದ ಆದೇಶದಂತೆ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿ ದೇವೇಗೌಡರ ಕೈಸೇರಿತು. ಮದ್ದಹನುಮೇಗೌಡರಿಗೆ ಟಿಕೆಟ್ ಕೊಡಿ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಾಲ್ಲೋಕಿನಲ್ಲಿ ಕೊನೆಘಳಿಗೆವರೆಗೆ ಹೋರಾಡಿದರೂ ಯಾವುದೇ ಪ್ರಯೋಜನವಿಲ್ಲದಂತಾಯಿತು. ಇದರಿಂದ ನೊಂದ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

        ತಾಲ್ಲೂಕಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾಂಗ್ರೇಸ್ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ 2019 ನೇ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಿಂದ ಮುಕ್ತಗೊಳಿಸಲು ಸೋನಿಯ ಹಾಗೂ ರಾಹುಲ್ ಗಾಂದಿ ತಿರ್ಮಾನಿಸಿ ಕರ್ನಾಟಕದಿಂದ ಅಡಿಪಾಯ ಹಾಕಿ ಜೆಡಿಎಸ್ ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.

        ಆ ನಿಟ್ಟಿನಲ್ಲಿ ದೇವೇಗೌಡರನ್ನು ಗೆಲ್ಲಿಸಲು ನಮ್ಮ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಜೆಡಿಎಸ್ ನೊಂದಿಗೆ ಒಗ್ಗೂಡಿ ಕೆಲಸ ಮಾಡಬೇಕೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದ ಸಂಧರ್ಭದಲ್ಲೇ ಕಾಂಗ್ರೇಸ್ ಮುಖಂಡನೊಬ್ಬ ತಾಲೂಕಿನ ಕಾಂಗ್ರೇಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಜೊತೆ ಸಮನ್ವಯ ಕೊರತೆ ಇದೆ. ದೇವೆಗೌಡರನ್ನು ಪ್ರದಾನಮಂತ್ರಿ ಮಾಡಿದ್ದು ಕಾಂಗ್ರೇಸ್ ಹಾಗೂ ಕುಮಾರ್‍ಸ್ವಾಮಿ ಮುಖ್ಯಮಂತ್ರಿ ಮಾಡಿರುವುದು ಕಾಂಗ್ರೇಸ್ ಪಕ್ಷ.

       ರಾಜ್ಯದಲ್ಲಿ ಸಮಿಶ್ರ ಸರ್ಕಾರ ಇದ್ದರು ಎಲ್ಲ ನಾಮಿನಿ ಸದಸ್ಯತ್ವ ಜೆಡಿಎಸ್‍ಗೆ ಲಬಿಸುತ್ತದೆ, ಕಾರಣ ದೇವೇಗೌಡರು ಗೆದ್ದರೆ ಕೈ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಆತಂಕ ನಮ್ಮಲ್ಲಿದೆ. ಅದನ್ನು ಜೆಡಿಎಸ್, ಕಾಂಗ್ರೇಸ್ ಜಿಲ್ಲಾ ಮುಖಂಡರುಗಳು ಸಮನ್ವಯ ಸಭೆ ಮಾಡಿ ಒಗ್ಗೂಡಿಸುವ ಪ್ರಯತ್ನ ಮಾಡಲಿ ಎಂದು ಸಭೆಯಲ್ಲಿ ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ ಪ್ರಸಂಗವೂ ನಡೆಯಿತು.

         ಕೆಲವು ಕಾಂಗ್ರೆಸ್ ಮುಖಂಡರ ಅಸಮಾದಾನ: ಕಾಂಗ್ರೆಸ್ ನ ಕೆಲವು ಮುಖಂಡರು ಹಾಗು ಕಾರ್ಯಕರ್ತರಲ್ಲಿ ಅಸಮಾದಾನದ ಹೊಗೆಯಾಡುತ್ತಲೇ ಇದೆ ಎನ್ನಬಹುದು. ಕಾರಣ ತಾಲ್ಲೂಕಿನಲ್ಲಿ ಜೆಡಿಎಸ್ ಗೆ ಮತನೀಡಿ ಎಂದು ಮತ ಕೇಳಲು ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರ ಮನಸ್ಸು ಸುತಾರಾಂ ಒಪ್ಪುತ್ತಿಲ್ಲ. ಆದರೂ ಮೈತ್ರಿ ಧರ್ಮದಂತೆ ನಾವೆಲ್ಲ ಸೇರಿ ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಹೆಚ್.ಡಿ.ದೇವೇಗೌಡರಿಗೆ ಮತ ಕೊಡಿ ಅಂತ ಮತದಾರರನ್ನು ಓಲೈಸಿ ಮತಹಾಕಿಸಬಹುದು.

       ಹಾಗೊಂದು ವೇಳೆ ಅವರು ಗೆದ್ದ ಮೇಲೆ ನಾವು ಅವರನ್ನು ಕಾಣಲು ಸಾಧ್ಯವೇ?. ಈಗಾಗಲೇ 15 ವರ್ಷಗಳ ಕಾಲ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ತಾಲ್ಲೂಕಿನಲ್ಲಿ ಆಡಳಿತ ನಡೆಸಿದ್ದು ಗ್ರಾ.ಪಂ., ತಾ.ಪಂ., ಜಿ.ಪಂ. ಗಳಲ್ಲಿ ನೇರ ಪ್ರತಿಸ್ಪರ್ಧಿಯಾಗಿದ್ದು ಮತ್ತೆ ಜೆಡಿಎಸ್ ಜೊತೆ ಹೊಂದಾಣಿಕೆ ಸಾಧ್ಯಾನಾ ಎಂಬ ಮಾತುಗಳು ಕೆಲವು ಕಾಂಗ್ರೆಸ್ ಮುಖಂಡರುಗಳಲ್ಲಿ ಈಗಾಗಲೇ ಕೇಳಿಬರುತ್ತಿದೆ. ಜೆಡಿಎಸ್ ಅವರೊಂದಿಗೆ ಪ್ರಚಾರಕ್ಕೆ ತೆರಳಲು ಮುಜುಗರ.

         ಹಾಗೊಂದು ವೇಳೆ ಮೈತ್ರಿಗೆ ಒಳಪಟ್ಟಿರುವುದರಿಂದ ನಾವುಗಳೇ ಪ್ರತ್ಯೇಕವಾಗಿ ದೇವೇಗೌಡರ ಪರವಾಗಿ ಚುನವಣಾ ಪ್ರಚಾರ ಮಾಡೋಣ ಎಂಬುದು ಕೆಲವರ ವಾದವಾದರೆ, ಮತ್ತೆ ಕೆಲವರು ನಾವೇನೋ ಕಾರ್ಯಕರ್ತರನ್ನು ಹುರಿದುಂಬಿಸಿ ದೇವೇಗೌಡರನ್ನು ಗೆಲ್ಲಿಸುತ್ತೇವೆ. ಗೆದ್ದ ನಂತರ ಸ್ಥಳೀಯ ಜೆಡಿಎಸ್ ನವರು ನಮ್ಮನ್ನು ನಿರ್ಲಕ್ಷಿಸಿದರೆ ನಮ್ಮ ಕ್ಷೇತ್ರಗಳಿಗೆ ಆಗುವ ಕಾರ್ಯಗಳನ್ನು ಮಾಡಿಸಿಕೊಳ್ಳಲು ನಾವು ಯಾರನ್ನು ಕಾಣಬೇಕು ಎಂಬ ವಾದ ವಿವಾದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೇಳಿಬರುತ್ತಿದೆ.

         ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಎಂಎಲ್‍ಸಿ ಬೆಮೆಲ್ ಕಾಂತರಾಜು ಕಾಂಗ್ರೆಸ್ ಕಾರ್ಯಕರ್ತರ ವಾದವಿವಾದ ಆಲಿಸಿ ದೇವೇಗೌಡರನ್ನು ಗೆಲ್ಲಿಸುವುದು ಮೈತ್ರಿ ಪಕ್ಷದ ಪ್ರತಿಷ್ಟೆಯಾಗಿರುವುದರಿಂದ ನೀವು ನಮ್ಮೊಂದಿಗೆ ಕೈಜೋಡಿಸಿದರೆ ಸಂಪೂರ್ಣ ಸಹಕಾರ ನೀಡುವುದಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳೂ ಸಹಾ ಕಾಂಗ್ರೆಸ್ ಕೆಲಮುಖಂಡರಿಂದ ಕೇಳಿಬರುತ್ತಿವೆ.

        ಬಿರುಸುಗೊಂಡ ಚುನಾವಣಾ ಪ್ರಚಾರ: ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಕೆಲ ಕಾಂಗ್ರೆಸ್ ಮುಖಂಡರುಗಳು ಜೆಡಿಎಸ್ ಮುಖಂಡರುಗಳು ಒಗ್ಗೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ, ಇತ್ತ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪರ ತಾಲ್ಲೂಕು ಶಾಸಕ ಮಸಾಲ ಜಯರಾಮ್ ತಾಲ್ಲೂಕಿನಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈಗಾಗಲೇ ಅಭ್ಯರ್ಥಿ ಜಿ.ಎಸ್.ಬಸವರಾಜು, ಮಾಜಿ ಸಚಿವ ವಿ.ಸೋಮಣ್ಣ, ಜಿ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಹೆಚ್.ಹುಚ್ಚಯ್ಯ, ವಿಧಾನಪರಿಷತ್ ಮಾಜಿ ಶಾಸಕ ಡಾ. ಹುಲಿನಾಯ್ಕರ್ ಸೇರಿದಂತೆ ಅನೇಕ ಮುಖಂಡರುಗಳು ಜಿಲ್ಲೆಗೆ ಹೇಮಾವತಿ ನೀರು ನೀಡುವಲ್ಲಿ ತಾರತಮ್ಯವೆಸಗಿದ ದೇವೇಗೌಡರ ವಿರುದ್ದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

       ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿದ್ದರೂ ಸಹಾ ಮತದಾರ ಮಾತ್ರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇವರುಗಳ ಕೆಸರೆರಚಾಟವನ್ನು ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದು, ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಲ್ಲಾ ಇನ್ನು ತಾಲ್ಲೋಕಿನ ರಾಜಕೀಯ ಯಾವ ಯಾವ ತಿರುವು ಪಡೆಯುವುದೋ? ಮತದಾರ ಯಾರ ಕೈ ಹಿಡಿಯುವರೋ? ಯಾರ ಕೊರಳಿಗೆ ವಿಜಯಲಕ್ಷ್ಮಿ ಒಲಿಯುವಳೋ ಎಂಬುದನ್ನು ಚುನಾವಣಾ ಫಲಿತಾಂಶದ ನಂತರವಷ್ಟೆ ಮನಗಾಣಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link