ಬೆಂಗಳೂರು
ದೇಶದಲ್ಲಿ ಹಾಗೂ ರಾಜ್ಯದಲ್ಲಿ ತೋಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚಿಸುವ ಮುಖಾಂತರ ವಿಶ್ವದಲ್ಲೇ ಅಗ್ರ ಗಣ್ಯ ಸ್ಥಾನ ಪಡೆಯಲು ಯುವಪೀಳಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯವು ತೋಟಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ದೇಶ ಮತ್ತು ವಿಶ್ವದಲ್ಲಿ ಅಗ್ರಗಣ್ಯರಾಗಲು ಸಾಕಷ್ಟು ಮತ್ತು ವಿಶಾಲವಾದ ಅವಕಾಶಗಳು ಈ ರಾಜ್ಯದಲ್ಲಿ ಲಭ್ಯವಿದ್ದು, ಇದರ ಸದಪಯೋಗಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯದ ಈ ವಿಶ್ವವಿದ್ಯಾನಿಲಯವು ಶಿಕ್ಷಣದ ಗುಣಮಟ್ಟ ಮತ್ತು ಬದ್ಧತೆಗೆ ಹೆಸರುವಾಸಿಯಾಗಿದೆ. ವಿಶ್ವವಿದ್ಯಾನಿಲಯವು ರೈತರ ಅನುಕೂಲಕ್ಕಾಗಿ ಕೃಷಿಯಲ್ಲಿ ಅನೇಕ ಹೊಸ ತಂತ್ರಜ್ಞಾನಗಳನ್ನು ಮತ್ತು ಸುಧಾರಿತ ಸಂಶೋಧನೆಗಳನ್ನು ಕೈಗೊಳ್ಳಲು ಹಲವಾರು ಸುಧಾರಿತ ಕೇಂದ್ರಗಳನ್ನು ಸ್ಥಾಪಿಸಿದೆ. ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಪ್ರತಿ ವರ್ಷ ತೋಟಗಾರಿಕೆ ಮೇಳಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಈ ದಿನ ಅನೇಕ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಗಿದೆ. ಅನೇಕ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಮತ್ತು ಪಿಎಚ್‌ಡಿ ಪದವಿಗಳನ್ನು ಸಹ ಸ್ವೀಕರಿಸಿದ್ದಾರೆ. ನೀವು ಪಡೆದ ಶಿಕ್ಷಣವನ್ನು ಇತರರಿಗೆ ನೀಡಲು ಪ್ರಯತ್ನಿಸಿ ಮತ್ತು ಮುಂಬರುವ ವಿದ್ಯಾರ್ಥಿಗಳು ನಿಮ್ಮಿಂದ ಸ್ಫೂರ್ತಿ ಪಡೆಯುವ ರೀತಿಯಲ್ಲಿ ಮುನ್ನಡೆಯಬೇಕು.
ಸ್ವಾಮಿ ವಿವೇಕಾನಂದರು ಯುವಕರೇ ಎದ್ದೇಳಲು, ಎಚ್ಚರಗೊಳ್ಳಲು ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ ಎಂದು ಕರೆ ನೀಡಿದ್ದರು, ಅದನ್ನು ಪರಿಪಾಲಿಸಿ. ಅವರು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ, ನೀವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಗೊಳಿಸಿಕೊಳ್ಳಿ.ಈ ಕೆಲಸದಲ್ಲಿ ವಿಶ್ವವಿದ್ಯಾಲಯದಿಂದ ಪಡೆದ ಶಿಕ್ಷಣ ಮತ್ತು ಬಲವಾದ ನೈತಿಕ ಅಡಿಪಾಯವು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ನವ ಭಾರತ, ಶ್ರೇಷ್ಠ ಭಾರತ, ಆತ್ಮನಿರ್ಭರ ಭಾರತ್ ಮಾಡಲು ಸಂಕಲ್ಪ ಮಾಡಿದ್ದಾರೆ. ಅತ್ಯುತ್ತಮ ಭಾರತ, ಸ್ವಾವಲಂಬಿ ಭಾರತ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪರಿಸರ ಅಸಮತೋಲನ ಪ್ರಸ್ತುತ ಜಗತ್ತಿನ ಗಂಭೀರ ಸಮಸ್ಯೆಯಾಗಿದೆ. ಪರಿಸರದ ರಕ್ಷಣೆ ಮತ್ತು ಪ್ರಚಾರ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಯ ದಿಕ್ಕಿನಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ ಎಂದರು.
75 ವರ್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ “ಪ್ರಗತಿಯನ್ನು” ಸಾಧಿಸಿದೆ ಮತ್ತು ದೇಶದ ಆರ್ಥಿಕತೆಯು ಹೆಚ್ಚು ಬಲಗೊಂಡಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮುಂದಿನ 25 ವರ್ಷಗಳು ಅಮೃತ ಕಾಲ. ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರುವ ಕರ್ತವ್ಯದ ಅವಧಿಯಾಗಿದೆ. ಈ ಕರ್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ನಾವು ಪಾಲುದಾರರಾಗಿರಬೇಕು ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಮುಖ್ಯ ಅತಿಥಿಗಳಾದ ಡಾ.ಉಧಮ್ ಸಿಂಗ್ ಗೌತಮ್, ಕುಲಪತಿ ಡಾ. ಇಂದಿರೇಶ್ ಕೆ. ಎಂ. ಮುಂತಾದ ಗಣ್ಯರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ