ಬೆಂಗಳೂರು:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳ ಕುರಿತಂತೆ ಚಾರ್ಜ್‌ಶೀಟ್‌ನಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಅವರು ಹಲವು ಸತ್ಯಗಳನ್ನು ಒಪ್ಪಿಕೊಂಡಿರುವುದು ಸೇರಿದಂತೆ ಹಲವು ಅಂಶಗಳು ದಾಖಲಾಗಿವೆ.ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯ ಕೆಲ ಪ್ರತಿಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.
ವಿಚಾರಣೆ ವೇಳೆ ದರ್ಶನ್ ಅವರು ರೇಣುಕಾಸ್ವಾಮಿಯವರ ಮೇಲೆ ಹಲ್ಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ನಿಂದ ನಾನು ಹೊರಟು ಬಂದಾಗ ಆತ ಚೆನ್ನಾಗಿಯೇ ಇದ್ದ ಎಂದು ಹೇಳಿಕೊಂಡಿದ್ದಾರೆ.
ಜೂನ್ 9ರಂದು ಮಧ್ಯಾಹ್ನ ಸುಮಾರು 1.30ರ ವೇಳೆ ನಾನು ಮತ್ತು ನಮ್ಮ ಮನೆಗೆ ಬಂದಿದ್ದ ಪ್ರದೋಷ್, ನಾಗರಾಜ್ ಜೊತೆಗೆ ಆರ್.ಆರ್.ನಗರದಲ್ಲಿರುವ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ಗೆ ಹೋಗಿದ್ದೆವು. ಅಲ್ಲಿ ಮಾಲೀಕರಾದ ವಿನಯ್ ಹಾಗೂ ಯಶಸ್ ಸೂರ್ಯ ಇದ್ದರು. ನಾನು ಹೋದ ನಂತರ ನಟ ಚಿಕ್ಕಣ್ಣ ಅವರು ಸಹ ಬಂದರು. ಮಧ್ಯಾಹ್ನ ಊಟ ಮುಗಿಸಿ ಮಾತನಾಡುತ್ತಾ ಕುಳಿತೆವು. ಸುಮಾರು 3 ಗಂಟೆ ಹೊತ್ತಿಗೆ ಮನೆಕೆಲಸಗಾರ ಪವನ್ ನನ್ನ ಬಳಿ ಬಂದು, ತನ್ನ ಮೊಬೈಲ್ ನನಗೆ ತೋರಿಸಿ ಗೌತಮ್ 5 ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪವಿತ್ರಾ ಅಕ್ಕನಿಗೆ ಸುಮಾರು ದಿನಗಳಿಂದ ಮೆಸೇಜ್‌ಗಳು ಬರುತ್ತಿವೆ.
ತನ್ನ ಖಾಸಗಿ ಅಂಗಾಂಗಳ ಚಿತ್ರಗಳನ್ನು ಕಳುಹಿಸುತ್ತಿದ್ದನಲ್ಲದೇ, ಪವಿತ್ರಾ ಅಕ್ಕನಿಗೆ ನಿನ್ನ ರೇಟ್ ಎಷ್ಟು?, ನಾನು ರೂಂ ಮಾಡುತ್ತೇನೆ, ನೀನು ಬಾ, ನಾನು ದರ್ಶನ್‌ಗಿಂತ ಚೆನ್ನಾಗಿದ್ದೇನೆ ಸೇರಿದಂತೆ ಇತ್ಯಾದಿ ಮೆಸೇಜ್‌ಗಳನ್ನು ಮಾಡಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ರಾಘವೇಂದ್ರ ಮತ್ತು ಆತನ ಸ್ನೇಹಿತರು ಕಿಡ್ನ್ಯಾಪ್ ಮಾಡಿಕೊಂಡು ಬಂದು ಪಾರ್ಕಿಂಗ್ ಶೆಡ್‌ನಲ್ಲಿ ಇಟ್ಟಿರುತ್ತಾರೆ ಎಂದು ಹೇಳಿದ. ಊಟದ ನಂತರ ಅಲ್ಲಿಗೆ ಹೋಗಿ ಅವನನ್ನು ಸರಿಯಾಗಿ ವಿಚಾರಿಸಿಕೊಂಡು ಬರೋಣ ಎಂದು ಅಂದು ತಿಳಿಸಿದ್ದೆ.
ನಂತರ ನಾನು, ನನ್ನ ಜೊತೆ ಇದ್ದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಅವರಿಗೆ ನೀವು ಮನೆಗೆ ಹೊರಡಿ ಎಂದು ಹೇಳಿದೆ. ನಾನು ವಿನಯ್, ಪ್ರದೋಷ್ ಅವರೊಂದಿಗೆ ಪ್ರದೋಷ್‌ನ ಸ್ಕಾರ್ಪಿಯೋ ಕಾರ್‌ನಲ್ಲಿ ಪವಿತ್ರಾ ಇದ್ದ ಮನೆಯ ಬಳಿ ಹೋಗಿ, ಪವಿತ್ರಾ ಅವರನ್ನು ಜೊತೆಗೆ ಕರೆದುಕೊಂಡು ಸುಮಾರು 4-30ರ ವೇಳೆಗೆ ವಿನಯ್ ಅವರ ಯಾರ್ಡ್ ತಲುಪಿದೆವು. ನಾವು ವಾಹನಗಳಿಂದ ಕೆಳಗೆ ಇಳಿದ ಕೂಡಲೇ ಪವನ್ ಬಂದು, ವಾಹನಕ್ಕೆ ಒರಗಿಕೊಂಡು ಕುಳಿತಿರುವ ವ್ಯಕ್ತಿಯನ್ನು ತೋರಿಸಿ ಇದೇ ವ್ಯಕ್ತಿ ಪವಿತ್ರಾ ಅಕ್ಕಗೆ ತನ್ನ ಖಾಸಗಿ ಅಂಗದ ಚಿತ್ರಗಳನ್ನು, ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿರೋದು ಎಂದು ಹೇಳಿದ. ರಾಘವೇಂದ್ರ, ದೀಪಕ್, ನಂದೀಶ್ ಸ್ಥಳದಲ್ಲಿದ್ದರು.
ಆ ವ್ಯಕ್ತಿ ಬಹಳ ಆಯಾಸಗೊಂಡವನಂತೆ ಕಂಡ. ನಾನು ಬರುವ ಮೊದಲೇ ಹೊಡೆದಂತೆ ತೋರಿತು. ನಂತರ ನಾನು ಆತನಲ್ಲಿ ಮೆಸೇಜ್ ಕಳುಹಿಸಿರುವುದು ನೀನೇನಾ? ಎಂದು ಕೇಳಿದೆ. ಅದಕ್ಕೆ ಆತ ಹೌದು, ನಾನೇ ಎಂದು ತಿಳಿಸಿದ. ಇದು ನಿನಗೆ ಬೇಕಾ?. ನಿನ್ನ ಸಂಬಳ ಎಷ್ಟು ಎಂದು ಕೇಳಿದೆ. ಅದಕ್ಕೆ 20 ಸಾವಿರ ಎಂದು ತಿಳಿಸಿದ. ನಂತರ ನಾನು, ನಿನಗೆ ತಿಂಗಳಿಗೆ ಇರೋದು 20 ಸಾವಿರ ಸಂಬಳ. ನನ್ನ ಮಗನೇ ನೀನು ಇವಳನ್ನು ಮೈಂಟೇನ್ ಮಾಡಲು ಸಾಧ್ಯನಾ, ಈ ರೀತಿಯಾಗಿ ಬಾ ಎಂದು ಕೆಟ್ಟದಾಗಿ ಮೆಸೇಜ್ ಮಾಡಿದ್ದೀಯಲ್ವಾ ಎಂದು ಕೇಳಿದೆ. ಅದಕ್ಕೆ ಆತ ಏನೂ ಉತ್ತರಿಸಲಿಲ್ಲ.
ಬಳಿಕ ನಾನು ಆತನಿಗೆ ಕೈಯಿಂದ ಹೊಡೆದೆ. ಕಾಲಿನಿಂದ ಬಲವಾಗಿ ತಲೆಯ ಭಾಗಕ್ಕೆ ಒದ್ದೆ. ಮರದ ಕೊಂಬೆ ಮುರಿದು ಹೊಡೆದು, ಕೈಗಳಿಂದ ಗುದ್ದಿದೆ. ನಂತರ ನಾನು ಕಾರಿನಲ್ಲಿ ಕುಳಿತಿದ್ದ ಪವಿತ್ರಾಳನ್ನು ಕರೆದುಕೊಂಡು ಬಂದು ನೋಡು ನಿನಗೆ ಮೆಸೇಜ್ ಮಾಡುತ್ತಿದ್ದವನು ಇವನೇ ಎಂದು ತೋರಿಸಿದೆ. ಪವಿತ್ರಾಳಿಗೆ ತನ್ನ ಚಪ್ಪಲಿಯನ್ನು ತೆಗೆದು ಹೊಡೆಯುವಂತೆ ಹೇಳಿದೆ. ಅವಳು ಚಪ್ಪಲಿಯಿಂದ ಹೊಡೆದಳು. ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಹೇಳಿದಾಗ, ಆತ ಪವಿತ್ರಾ ಕಾಲಿಗೆ ಬಿದ್ದ. ಆಕೆ ಹಿಂದೆ ಸರಿದಳು. ಆಗ ನಾನು ಆಕೆಯನ್ನು ಕಾರಿನ ಬಳಿ ಬಿಡುವಂತೆ ಪ್ರದೋಷ್ಗೆ ಸೂಚಿಸಿದೆ.
ಕಾರು ಚಾಲಕ ಲಕ್ಷ್ಮಣ್ ಸಹ ಅಲ್ಲಿಗೆ ಬಂದಿದ್ದು, ಆತ ಕೂಡಾ ವಿಚಾರ ತಿಳಿದು ರೇಣುಕಾಸ್ವಾಮಿಗೆ ಕೈಯಿಂದ ಕತ್ತಿಗೆ ಮತ್ತು ಬೆನ್ನಿಗೆ ಹೊಡೆದ. ನಂದೀಶ ಆತನನ್ನು ಜೋರಾಗಿ ಎತ್ತಿ ಒಂದು ಬಾರಿ ನನ್ನ ಮುಂದೆ ಕುಕ್ಕಿದ. ನಾನು ಪವನ್ ಬಳಿ ಇವನು ಇನ್ನು ಯಾರ್ಯಾರಿಗೆ ಈ ರೀತಿಯಾಗಿ ಕೆಟ್ಟ ಕೆಟ್ಟ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ, ಏನು ಮೆಸೇಜ್ ಮಾಡಿದ್ದಾನೆಂದು ಹೇಳು ಎಂದು ಹೇಳಿದೆ. ಪವನ್ ಅವನ ಮೊಬೈಲ್ ತೆಗೆದು ಅವನು ಕೆಲವರಿಗೆ ಕೆಟ್ಟದಾಗಿ ಕಳುಹಿಸಿದ್ದ ಮೆಸೇಜ್‌ಗಳನ್ನು ಓದಿದ. ಅದರಲ್ಲಿನ ಫೋಟೋಗಳನ್ನು ಎಲ್ಲರಿಗೂ ತೋರಿಸಿದ.
ಅವನು ಈ ರೀತಿಯಾಗಿ ಇನ್ನೂ ಅನೇಕ ಚಲನಚಿತ್ರ ನಟಿಯರಿಗೂ ಸಹ ಪೋಟೋ ಕಳುಹಿಸಿ ಮೆಸೇಜ್ ಮಾಡಿದ್ದ. ಆಗ ಲಕ್ಷ್ಮಣ್ ಇವನು ಚಾಳಿ ಬಿದ್ದಿದ್ದು ಬಹಳ ಕೆಟ್ಟ ಕೆಟ್ಟದಾಗಿ ಮೆಸೇಜ್‌ಗಳನ್ನು ಪವಿತ್ರಾರಿಗೆ ಕಳುಹಿಸಿದ್ದಾನೆ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲ ಎಂದು ಹೇಳಿ, ನನಗೂ ಸಹ ಪೋಟೋ ಮತ್ತು ಮೆಸೇಜ್‌ಗಳನ್ನು ತೋರಿಸಿದ. ಆಗ ನಾನು ಅವನಿಗೆ ಬೈದು ಕಾಲಿನಿಂದ ಒಂದೆರಡು ಬಾರಿ ಒದ್ದೆ.
ಹಲ್ಲೆ ಬಳಿಕ ನಾನು (ದರ್ಶನ್) ಮತ್ತು ವಿನಯ್ ಹೊರಟೆವು. ನಾನು ಯಾರ್ಡ್ ಗೇಟ್ ಹತ್ತಿರ ಜೀಪ್ ಹತ್ತಲು ಹೋದಾಗ ಅಲ್ಲಿ ಚಿತ್ರದುರ್ಗದ ಹುಡುಗರಿದ್ದರು. ಅವರು ಅಣ್ಣ ಒಂದು ಫೋಟೋ ಎಂದು ಕೇಳಿದರು. ಆಗ ನಾನು ಅವರೊಂದಿಗೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡೆ. ವಿನಯ್ ಜೀಪ್‌ನಲ್ಲಿ ಕುಳಿತು ಮನೆಗೆ ಹೊರಟೆ. ಅಲ್ಲಿಂದ ನಾನು ಹೊರಟಾಗ ಜಯಣ್ಣರವರು ಸಿಕ್ಕಿದರು. ಅವರನ್ನು ಮಾತನಾಡಿಸಿಕೊಂಡು, ನೇರವಾಗಿ ಐಡಿಯಲ್ ಹೋಮ್ಸ್‌ನ ನನ್ನ ಮನೆಗೆ ಹೋದೆ. ಸುಮಾರು 7.30ರ ಗಂಟೆಯ ಸಮಯದಲ್ಲಿ ಪ್ರದೋಷ್ ವಾಪಸ್ ಮನೆ ಹತ್ತಿರ ಬಂದ. ರೇಣುಕಾಸ್ವಾಮಿ ಸತ್ತುಹೋಗಿರುವ ವಿಚಾರವನ್ನು ತಿಳಿಸಿದ.
ನಾವು ಬರುವ ಸಮಯದಲ್ಲಿ ಆತ ಚೆನ್ನಾಗಿದ್ದ, ನಂತರ ಏನಾಯ್ತು ಎಂದು ಕೇಳಿದೆ. ಆಗ ಪ್ರದೋಷ್ ಯಾರ್ಡ್ ಹತ್ತಿರ ಹೋಗಿ ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋದ. ನಂತರ ಸುಮಾರು 9 ವೇಳೆಗೆ ಪ್ರದೋಷ್, ವಿನಯ್, ನಾಗರಾಜ್, ಲಕ್ಷ್ಮಣ್ ಅವರುಗಳು ಮನೆಗೆ ಬಂದರು. ರೇಣುಕಾಸ್ವಾಮಿ ಸತ್ತಿರುವ ಬಗ್ಗೆ ತಿಳಿಸಿದರು. ಆಗ ಪ್ರದೋಷ್ ನಾನು ಹ್ಯಾಂಡಲ್ ಮಾಡುತ್ತೇನೆಂದು ಹೇಳಿ 30 ಲಕ್ಷ ರೂ. ಹಣವನ್ನು ಕೊಡುವಂತೆ ಕೇಳಿದ. ಆಗ ನಾನು ಮನೆಯಲಿಟ್ಟಿದ್ದ 30 ಲಕ್ಷ ರೂ. ಹಣವಿದ್ದ ಒಂದು ಬ್ಯಾಗ್ ಅನ್ನು ಪ್ರದೋಷ್ಗೆ ಕೊಟ್ಟೆ. ಅವರುಗಳು ಅಲ್ಲಿಂದ ಹೊರಟು ಹೋಗಿ ಸ್ವಲ್ಪ ಸಮಯದ ನಂತರ ಮತ್ತೆ ವಾಪಸ್ ಮನೆಗೆ ಬಂದರು. ಆಗ ವಿನಯ್ 10 ಲಕ್ಷ ರೂ. ಕೊಡಿ ಎಂದು ಕೇಳಿದ. ಅದರಂತೆ ನಾನು ಹಣ ಕೊಟ್ಟಿರುತ್ತೇನೆ ಎಂದು ದರ್ಶನ್ ವಿವರಿಸಿದ್ದಾರೆ.
ಈ ನಡುವೆ ಪ್ರಕರಣದಲ್ಲಿ ಎ.1 ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಕೂಡ ಹೇಳಿಕೆ ನೀಡಿದ್ದು, ದರ್ಶನ್ ಪರಿಚಯ ಕುರಿತು ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ.
ನಾನು ಮತ್ತು ದರ್ಶನ್ ಸಲುಗೆಯಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೆವು. ದರ್ಶನ್ ಅವರು ವಿಜಯಲಕ್ಷ್ಮಿ ಅವರೊಂದಿಗೆ ಮದುವೆಯಾಗಿ ಮಗ ಇರುವುದು ಮೊದಲು ಗೊತ್ತಿರಲಿಲ್ಲ, ನಂತರ ತಿಳಿಯಿತು. ನಾವು ವಾಸ ಮಾಡುತ್ತಿದ್ದ ಜೆ.ಪಿ ನಗರದ ಮನೆಗೆ ದರ್ಶನ್ ಬರುತ್ತಿದ್ದರು. ಆಗಾಗ್ಗೆ ನಾವು ಲಾಂಗ್ ಡ್ರೈವ್ ಹೋಗುತ್ತಿದ್ದೆವು. ನಾನು, ನನ್ನ ಮಗಳು ಹಾಗೂ ದರ್ಶನ್ ಮೂವರು ವಾಸ ಮಾಡೋದಕ್ಕಾಗಿಯೇ ಆರ್.ಆರ್ ನಗರದಲ್ಲಿ ನನ್ನ ಹೆಸರಿಗೆ ಮನೆ ಖರೀದಿ ಮಾಡಿದ್ದರು. ಮನೆಯನ್ನು ಖರೀದಿಸಲು ನಿರ್ಮಾಪಕ ಸೌಂದರ್ಯ ಜಗದೀಶ್ ಮೂಲಕ 1.75 ಕೋಟಿ ರೂ. ಹಣವನ್ನು ಕನಕಪುರ ರಸ್ತೆಯಲ್ಲಿರುವ ನನ್ನ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. 2018ರ ಫೆಬ್ರವರಿ ತಿಂಗಳಲ್ಲಿ ಮನೆಯ ಗೃಹಪ್ರವೇಶ ಮಾಡಿ ಅಂದಿನಿಂದ ಅಲ್ಲೇ ವಾಸವಿದ್ದೆವು.
ಇನ್ನೂ ದರ್ಶನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಸುಮಾರು 7-8 ವರ್ಷಗಳಿಂದ ಪರಿಚಯವಾಗಿದ್ದ. ನಂತರ ಪವನ್ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಪವನ್ ನನಗೆ ತುಂಬಾ ಚೆನ್ನಾಗಿ ಗೊತ್ತಿದ್ದ, ನನ್ನ ಎಲ್ಲಾ ವ್ಯವಹಾರಗಳೂ ಅವನಿಗೆ ಗೊತ್ತಿತ್ತು. ದರ್ಶನ್ ಮನೆ ಮತ್ತು ನಮ್ಮ ಮನೆಗೆ ಸುಮಾರು ಒಂದೂವರೆ ಕಿಮೀ ದೂರವಿತ್ತು. ಪವನ್‌ಗೆ ನಮ್ಮ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ ಇತ್ತು. ನನ್ನನ್ನು ಅಕ್ಕ ಅಕ್ಕ ಎಂದು ಕರೆಯುತ್ತಿದ್ದ.
2014ರಲ್ಲಿ ಬುಲ್ ಬುಲ್ ಚಿತ್ರದ ಆಡಿಷನ್‌ಗೆ ಹೋಗಿದ್ದಾಗ ನನ್ನ ಮಾಡೆಲಿಂಗ್ ಪ್ರೊಫೈಲನ್ನು ದರ್ಶನ್ ಅವರಿಗೆ ಷೇರು ಮಾಡಿ ಅವರೊಂದಿಗೆ ಮಾತನಾಡಲು ಅವರ ಮೊಬೈಲ್ ನಂಬರ್ ಅನ್ನು ಪರಿಚಿತ ಮ್ಯಾನೇಜರ್ ಅವರಿಂದ ಪಡೆದುಕೊಂಡಿದ್ದೆ. ಈ ವಿಚಾರವಾಗಿ ದರ್ಶನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಬುಲ್ ಬುಲ್ ಚಿತ್ರಕ್ಕೆ ಈಗಾಗಲೇ ಆಡಿಷನ್ ಮುಗಿದಿದೆ. ಬೇರೆ ಯಾವುದಾದರೂ ಚಿತ್ರಕ್ಕೆ ಅವಶ್ಯಕತೆಯಿದ್ದರೆ ತಿಳಿಸುವುದಾಗಿ ಹೇಳಿದ್ದರು. ನಂತರ ಇದನ್ನೆ ನೆಪವಾಗಿಟ್ಟುಕೊಂಡು ಪ್ರತಿದಿನ ದರ್ಶನ್ ಅವರಿಗೆ ಫೋನ್‌ನಲ್ಲಿ, ವಾಟ್ಸಪ್‌ನಲ್ಲಿ ಚಾಟಿಂಗ್ ಮತ್ತು ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದೆವು. ನಂತರ ಆಗಾಗ್ಗೆ ಭೇಟಿ ಮಾಡುತ್ತಿದ್ದೆ.
2013ರಲ್ಲಿ ನಾನು ವೈಯಕ್ತಿಕ ಹಾಗೂ ಮಾಡೆಲಿಂಗ್ ವಿಚಾರ ಹಂಚಿಕೊಳ್ಳಲು ನನ್ನದೇ ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದೆ. ಈ ಖಾತೆಯನ್ನು ನನ್ನ ಐಫೋನ್ ಮ್ಯಾಕ್ಸ್-14 ಮೊಬೈಲ್‌ನಿಂದಲೇ ನಿರ್ವಹಣೆ ಮಾಡುತ್ತಿದ್ದೆ. ಈ ಫೋನನ್ನು ದರ್ಶನ್ ಅವರೇ ಕೊಡಿಸಿದ್ದರು. ಹಲವಾರು ನೆಟ್ಟಿಗರು ನನ್ನ ಇನ್‌ಸ್ಟಾ ಖಾತೆಯನ್ನು ಹಿಂಬಾಲಿಸುತ್ತಿದ್ದರು. ಖಾತೆ ಪಬ್ಲಿಕ್ ಆಗಿದ್ದರಿಂದ ನೆಟ್ಟಿಗರು ನೇರವಾಗಿ ಮೆಸೇಜ್ ಮಾಡುತ್ತಿದ್ದರು. ಇನ್‌ಬಾಕ್ಸ್ ತೆರೆದು ನೋಡಿದಾಗ ಕೆಲವರು ಅಸಭ್ಯ ರೀತಿಯ ಮೆಸೇಜ್ ಕಳುಹಿಸಿರುತ್ತಿದ್ದರು. ಅಂತಹ ನೆಟ್ಟಿಗರ ಪ್ರೊಫೈಲ್‌ಗಳನ್ನು ಬ್ಲಾಕ್ ಮಾಡುತ್ತಿದ್ದೆ. ಕೆಲವೊಮ್ಮೆ ಈ ರೀತಿ ಅಸಹ್ಯಕರ ಮೆಸೇಜ್‌ಗಳು ಬಂದಾಗ ಸ್ಕ್ರೀನ್ ಶಾಟ್ ತೆಗೆದು ದರ್ಶನ್ ಅವರಿಗೂ ತೋರಿಸುತ್ತಿದ್ದೆ.
ದರ್ಶನ್ ಅವರು 2024ರ ಮೇ 19ರಂದು ವಿಜಯಲಕ್ಷ್ಮಿ ಅವರೊಂದಿಗೆ ನನಗೆ ತಿಳಿಸದೇ ದುಬೈಗೆ ಹೋಗಿ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದರು. ಆವತ್ತಿನಿಂದ ನಾನು ದರ್ಶನ್ ಅವರೊಂದಿಗೆ ಜಗಳ ಮಾಡಿಕೊಂಡು ಮಾತನಾಡುವುದನ್ನು ನಿಲ್ಲಿಸಿದ್ದೆ.
ಹೀಗಿರುವಾಗ 2024ರ ಫೆಬ್ರವರಿಯಿಂದ ಕೆ.ಎಸ್ ಗೌತಮ್ 1990 ಎನ್ನುವ ಇನ್‌ಸ್ಟಾಗ್ರಾಮ್ ಖಾತೆಯಿಂದ ಒಬ್ಬ ವ್ಯಕ್ತಿಯು ಬಹಳ ಕೆಟ್ಟದ್ದಾಗಿ ಹಲವು ಅಶ್ಲೀಲ ಸಂದೇಶ, ಫೋಟೋ ಹಾಗೂ ವೀಡಿಯೋಗಳನ್ನು ನಿರಂತರವಾಗಿ ನನ್ನ ಖಾತೆಗೆ ಕಳಿಸುತ್ತಿದ್ದ. ನಾನು ಈ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ನಂತರ ಮೆಸೇಜ್ ಕಳಿಸುತ್ತಿದ್ದ ವ್ಯಕ್ತಿಯ ಹುಟುಕಾಟದ ಬಗ್ಗೆ ಪವನ್ ಜೊತೆಗೆ ವಿಚಾರ ಮಾಡುತ್ತಿದ್ದೆ. ಅದಕ್ಕೆ ಪವನ್ ಚಿತ್ರದುರ್ಗದಲ್ಲಿ ಆತನನ್ನು ಹುಡುಕಲು ದರ್ಶನ್ ಅಭಿಮಾನಿಗಳಿಗೆ ಒಪ್ಪಿಸಿದ್ದ. ನಂತರ ರೇಣುಕಾಸ್ವಾಮಿ ಪತ್ತೆಹಚ್ಚಿ ಹಲ್ಲೆ ನಡೆಸಿದ ಬಗ್ಗೆ ಪವಿತ್ರಾಗೌಡ ಹೇಳಿಕೊಂಡಿರುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.