ಬೆಂಗಳೂರು
ಪೊಲೀಸ್ ಸಿಬ್ಬಂದಿಯ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೀಡಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ತಿಲಕ್ ನಗರ ಪೊಲೀಸ್ ಠಾಣೆ ಹಾಗೂ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ನವೀಕರಣ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹಗಲು-ರಾತ್ರಿ ಎನ್ನದೆ, ಸಮಾಜಕ್ಕಾಗಿ ಶ್ರಮಿಸುವ ಪೊಲೀಸರಿಗೆ ಹೆಚ್ಚಿನ ಸೌಲಭ್ಯ ದೊರಕಬೇಕು ಎಂಬ ಉದ್ದೇಶದಿಂದ ಔರಾದ್ಕರ್ ವರದಿಯನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.
ಭಯವಿಲ್ಲದೇ ಜನತೆ ಪೊಲೀಸ್ ಠಾಣೆಯಲ್ಲಿ ಸೇವೆ ಪಡೆಯುವ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಉದ್ದೇಶಿಸಲಾಗಿದೆ. ಪೊಲೀಸರಿಗೆ ತರಬೇತಿ ಸಂದರ್ಭದಲ್ಲೇ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಲಾಗುವುದು ಎಂದರು.
1 ಕೋಟಿ ರು. ವೆಚ್ಚದಲ್ಲಿ ತಿಲಕ್ ನಗರ ಪೊಲೀಸ್ ಠಾಣೆ ಕಟ್ಟಡ ನವೀಕರಣ ಮಾಡಿರುವ ಇನ್‍ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರ ಕೊಡುಗೆ ಶ್ಲಾಘನೀಯ. ಸೈಬರ್ ಕ್ರೈಂ ತರಬೇತಿ ಕಟ್ಟಡವನ್ನು 22 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್‍ಫೋಸಿಸ್ ಸಂಸ್ಥೆ ನಿರ್ಮಿಸಿಕೊಡುತ್ತಿದೆ. ಕರ್ನಾಟಕ ಪೊಲೀಸ್ ಅನ್ನು ಆಧುನೀಕರಣ ಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ಸರಕಾರದ ನೆರವಿನೊಂದಿಗೆ ಸಿಸಿ ಕ್ಯಾಮರಾ ಅಳವಡಿಕೆ, ಟ್ರಾಫಿಕ್ ನಿಯಮ ಪಾಲನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ