ತ್ವರಿತಗತಿಯಲ್ಲಿ ನೇರ ನಗದು ವರ್ಗಾವಣೆಗೆ ಕ್ರಮ : ಕೆ ಹೆಚ್‌ ಮುನಿಯಪ್ಪ

ಬೆಂಗಳೂರು:

     ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಯ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿ ಕುಟುಂಬಗಳಲ್ಲಿ ಈವರೆಗೂ 1 ಕೋಟಿ ಕುಟುಂಬಗಳಿಗೆ ರೂ. 566 ಕೋಟಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದರು. 

    ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 5 ಕೆ.ಜಿ. ಆಹಾರ ಧಾನ್ಯಗಳ ಬದಲಾಗಿ ಅರ್ಹ ಫಲಾನುಭವಿಗಳಿಗೆ ಪ್ರತಿ ಕೆ.ಜಿಗೆ ಎಫ್ ಸಿಐ ನಿಗಧಿಪಡಿಸಿದ ರೂ. 34ರಂತೆ ಪ್ರತಿ ಫಲಾನುಭವಿಗೆ ರೂ.170  ನೇರ ನಗದು ವರ್ಗಾವಣೆ ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

 

    ತ್ವರಿತಗತಿಯಲ್ಲಿ ನೇರ ನಗದು ವರ್ಗಾವಣೆ ಮಾಡಲು ಇಲಾಖೆ ಹಲವು ಕ್ರಮ ಕೈಗೊಂಡಿದ್ದು,  ಕುಟುಂಬದ ಮುಖ್ಯಸ್ಥರಿಲ್ಲದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿರುವ 58,392 ಪಡಿತರ ಚೀಟಿಗಳನ್ನು ಆಹಾರ ನಿರೀಕ್ಷಕರ ಲಾಗಿನ್ ನಲ್ಲಿ ಸೂಕ್ತ ತಿದ್ದುಪಡಿ ಮಾಡಲು ಇಲಾಖೆ ಕ್ರಮ ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.

    ಹೊಸ ಪಡಿತರ ಚೀಟಿ ವಿತರಣೆ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿದ್ದು, ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ವಿತರಣೆಗೆ ಕ್ರಮ ವಹಿಸಲಾಗುವುದು, ತುರ್ತು ವೈದ್ಯಕೀಯ ಕಾರಣಗಳಿಗೆ ಹೊಸ ಪಡಿತರ ನೀಡಲು ಅನುಮತಿ ನೀಡಲಾಗುವುದು ಎಂದರು.

   ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿರುವಂತೆ ಆಹಾರ ಧಾನ್ಯ ಪಡೆಯುವವರಿಗೆ A ಕಾರ್ಡ್ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ  B ಕಾರ್ಡ್ ವಿತರಣೆ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳ ತಂಡ ರಚಿಸಲಾಗುವುದು, ಈ ತಂಡ ಆ ರಾಜ್ಯಕ್ಕೆ ಭೇಟಿ ನೀಡಿ ವರದಿ ಪಡೆದುಕೊಂಡ ನಂತರ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap