ನವದೆಹಲಿ:
ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಪಟ್ಟು ಹಿಡಿದು, ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರತಿಪಕ್ಷಗಳ 15 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಆದರೆ ಡಿಎಂಕೆ ಸಂಸದ ಎಸ್.ಆರ್. ಪಾರ್ತಿಬನ್ ಅವರು ಕಲಾಪಕ್ಕೆ ಹಾಜರಾಗದಿದ್ದರೂ ಅವರನ್ನು ಅಮಾನತು ಮಾಡಲಾಗಿದೆ ಎಂದು ಹಲವು ಸಂಸದರು ದೂರಿದರು.
ಇತರರು ಕಲಾಪಕ್ಕೆ ಅಡ್ಡಿಪಡಿಸಿದಾಗ ಸದಸ್ಯರು ಸದನದಲ್ಲಿ ಹಾಜರಿರದಿದ್ದರೂ ಅವರನ್ನು ತಪ್ಪಾಗಿ ಗುರುತಿಸಿ ಅಮಾನತು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ, ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಸಲ್ಲಿಸಿದ ನಂತರ ಡಿಎಂಕೆ ಸಂಸದ ಎಸ್‌ಆರ್ ಪಾರ್ತಿಬನ್ ಅವರ ಅಮಾನತು ಕ್ರಮವನ್ನು ಲೋಕಸಭೆ ಹಿಂಪಡೆದಿದೆ.
ಈಗ, ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ 14ಕ್ಕೆ ಇಳಿದಿದೆ.
ಸದಸ್ಯರನ್ನು ಗುರುತಿಸುವಲ್ಲಿ ಸಿಬ್ಬಂದಿಯ ಕಡೆಯಿಂದ ತಪ್ಪಾಗಿರುವ ಕಾರಣ ಪಾರ್ತಿಬನ್ ಅವರ ಹೆಸರನ್ನು ಅಮಾನತುಗೊಳಿಸಿದ ಲೋಕಸಭಾ ಸದಸ್ಯರ ಪಟ್ಟಿಯಿಂದ ಹಿಂಪಡೆಯಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ತಪ್ಪಾದ ಗುರುತಿನ ಪ್ರಕರಣವಾಗಿರುವುದರಿಂದ ಸದಸ್ಯರ ಹೆಸರನ್ನು ಕೈಬಿಡುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದೇನೆ ಮತ್ತು ಅಮಾನತು ಹಿಂಪಡೆಯಲು ಸ್ಪೀಕರ್ ಒಪ್ಪಿಗೆ ನೀಡಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.