ಹಾಸನ:
ʼʼಯಾರೋ ಒಬ್ಬರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ಮೈತ್ರಿ ಅನಿವಾರ್ಯ ಅಂತ ಹೇಳಿದರೆ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲʼʼ ಎಂದು ಮಾಜಿ ಶಾಸಕ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼ28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಿಲ್ಲಲಿ, ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಬೇಕು ಅಂತ ಬಂದರೆ ಸ್ವಾಗತವಿದೆ.ಬಿಜೆಪಿ ಪಕ್ಷ ಉಳಿಸಿಕೊಳ್ಳಲು ನಮಗೆ ಗೊತ್ತಿದೆ. ಜೆಡಿಎಸ್ ಉಳಿಸಲು ನಾನ್ಯಾಕೆ ಕೆಲಸ ಮಾಡಬೇಕು?ʼʼ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ʼʼಆ ರೀತಿಯ ರಾಜಕಾರಣದ ಅವಶ್ಯಕತೆ ಬಿಜೆಪಿ ಕಾರ್ಯಕರ್ತರಿಗೆ ಇಲ್ಲ. ಅವರ ಪಕ್ಷ, ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಂಡರೆ ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರು ಒಪ್ಪೋದಿಲ್ಲ, ಅದರಲ್ಲಿ ಪ್ರೀತಂಗೌಡ ಕೂಡ ಒಬ್ಬʼʼ ಎಂದು ಸ್ಪಷ್ಟಪಡಿಸಿದರು.
ʼʼನಾವು ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಹಾಸನದಲ್ಲಿ ಅವರ ಕುಟುಂಬದವರು ಅಭ್ಯರ್ಥಿ ಆಗುತ್ತಾರೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಜೆಡಿಎಸ್ ಉಳಿಸಲು ನಾನ್ಯಾಕೆ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಒಪ್ಪಲ್ಲʼʼ ಎಂದು ಮೈತ್ರಿ ಬಗ್ಗೆ ವಿರೋಧ ವ್ಯಿಕ್ತಪಡಿಸಿದರು.
ʼʼಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಣ್ಣ ಜಿಲ್ಲೆಯಲ್ಲಿ ಒಕ್ಕಲಿಗ ನಾಯಕರು ಬೆಳೆಯಬಾರದು, ಪ್ರೀತಂ ಜೆ.ಗೌಡ ಬೆಳೆಯಬಾರದು ಎಂದು ವಿಧಾನಸಭಾ ಚುನಾವಣೆಯಲ್ಲಿ ತನ್ನ ವಿರುದ್ಧ ಪ್ರಚಾರ ಮಾಡಿದ್ದರು. ಜೆಡಿಎಸ್‌ನವರು ನನ್ನ ಮನೆಗೆ ಕಲ್ಲು ಹೊಡೆದರು. ಈಗ ಅವರೊಂದಿಗೆ ಚೆನ್ನಾಗಿರಲು ಹೇಗೆ ಸಾಧ್ಯʼʼ ಎಂದು ಪ್ರೀತಂಗೌಡ ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
