ಇನ್ನು ಬಂಡೀಪುರ, ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಫಾರಿ

-ಸುಂದರ್‌ ತ್ರಿನೇಶ್ 


ಚಾಮರಾಜನಗರ : ರಾಜ್ಯ ಸರ್ಕಾರ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ವಿಧಿಸಲಾಗಿದ್ದ ಸಫಾರಿ ನಿರ್ಬಂಧವನ್ನು ಇದೀಗ ತೆರವುಗೊಳಿಸಿ ಅಲ್ಲಿ ಪೂರ್ಣ ಪ್ರಮಾಣದಲ್ಲಿ ಸಫಾರಿಗೆ ಹಸಿರು ನಿಶಾನೆ ನೀಡುವ ಮೂಲಕ ವನ್ಯಜೀವಿಪ್ರಿಯರಿಗೆ ಗುಡ್ ನ್ಯೂಸ್ ನೀಡುವ ಜತೆಗೆ ಪ್ರವಾಸೋದ್ಯಮಕ್ಕೆ ಹೊಸ ಕಳೆಯನ್ನು ನೀಡಿದೆ.

ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿಯ ವರದಿ ಶಿಫಾರಸಿನ ಅನ್ವಯ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಂಗಲ್ ಸಫಾರಿ (ಉದ್ಯಾನ ಪ್ರವಾಸ) ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.

ಈ ಬಗ್ಗೆ ತಾಂತ್ರಿಕ ಸಮಿತಿಯ ವರದಿಯನ್ನು ಅಂಗೀಕರಿಸಲಾಗಿದ್ದು, ವೈಜ್ಞಾನಿಕ ಮೌಲ್ಯಮಾಪನದ ನಂತರ ಪರಿಣಾಮಕಾರಿ ಸಾಗಣೆ ಸಾಮರ್ಥ್ಯದ ಆಧಾರದ ಮೇಲೆ ಜಂಗಲ್ ಸಫಾರಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಸಮಿತಿಯ ಶಿಫಾರಸಿನಂತೆ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸಲು ಸೂಚನೆ ನೀಡಲಾಗಿದೆ.

ಕರ್ನಾಟಕವು ಪರಿಸರ ಪ್ರವಾಸೋದ್ಯಮದಲ್ಲಿ ಅಪಾರ ಸಾಮರ್ಥ್ಯ ಹೊಂದಿದೆ. ಸದಾ ಸುಸ್ಥಿರ ಪ್ರವಾಸೋದ್ಯಮ ಮಾದರಿ ಪಾಲಿಸಿಕೊಂಡು ಬಂದಿದೆ. ಇದು ಸ್ಥಳೀಯ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳ ಸೃಷ್ಟಿಗೆ ಸಹಾಯ ಮಾಡುತ್ತದೆ ಹಾಗೂ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸಲು ನೆರವಾಗುತ್ತದೆ. ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುವ ಜೊತೆಗೆ, ಪರಿಸರ ಪ್ರವಾಸೋದ್ಯಮವು ವನ್ಯಜೀವಿ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ ಮತ್ತು ಪ್ರವಾಸಿಗರ ಉತ್ತಮ ಅನುಭವಕ್ಕೆ ಪೂರಕವಾದ ಪರಿಸರ ಪ್ರವಾಸೋದ್ಯಮಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಕಚೇರಿ ತಿಳಿಸಿದೆ.

ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗಿದ್ದಂರಿದ ಕಳೆದ ವರ್ಷ ನವೆಂಬರ್​ನಲ್ಲಿ ತಾತ್ಕಾಲಿಕವಾಗಿ ಸಫಾರಿ ಬಂದ್ ಮಾಡಲಾಗಿತ್ತು. 2026 ಫೆಬ್ರವರಿ 19ರಂದು ಶೇ.50ರಷ್ಟು ಸಾಮ್ಯರ್ಥದಲ್ಲಿ ಕಡಿಮೆ ಅವಧಿಯೊಂದಿಗೆ ಷರತ್ತಿಗೊಳಪಟ್ಟು ಸಫಾರಿಗೆ ಅನುಮೋದಿಸಲಾಗಿತ್ತು. ಸದ್ಯ ಪೂರ್ಣ ಪ್ರಮಾಣದಲ್ಲಿ ಸಫಾರಿಗೆ ಅನುಮತಿ ದೊರೆತಿದೆ.

ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಎರಡು ಅರಣ್ಯ ಪ್ರದೇಶಗಳಲ್ಲಿ ಸಫಾರಿ ಬಂದ್‌ಗೆ ಆಗ್ರಹಿಸಿ ರೈತಪರ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಿದ್ದವು. ಆ ಸಂದರ್ಭದಲ್ಲಿ ಸರ್ಕಾರ 2025ರ ನವೆಂಬರ್​ನಲ್ಲಿ ತಾತ್ಕಾಲಿಕವಾಗಿ ಸಫಾರಿ ಬಂದ್ ಮಾಡಿತ್ತು. ಇದರಿಂದ ಆ ಸಂದರ್ಭದಲ್ಲಿ ಮಾನವ ವನ್ಯಜೀವಿ ಸಂಘರ್ಷ ಕೆಲ ಪ್ರಮಾಣದಲ್ಲಿ ಕಡಿಮೆಯಾಗಿತ್ತು ಎಂದು ಹೇಳಬಹುದಾಗಿತ್ತು.

ಆದರೆ ಇದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಂತೆಯೂ ಆಗಿತ್ತು. ಪ್ರವಾಸೋದ್ಯಮ ಸ್ಥಳೀಯ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಿಕೊಟ್ಟಿತ್ತು. ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸಲು ನೆರವಾಗಿತ್ತು. ಅಲ್ಲದೆ ಹೋಟೇಲ್‌ ಉದ್ಯಮಕ್ಕೆ ನೆರವಾಗಿತ್ತು. ಆದರೆ
ಮಾನವ ಸಂಘರ್ಷ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸರ್ಕಾರ 2025ರ ನವೆಂಬರ್​ನಲ್ಲಿ ತಾತ್ಕಾಲಿಕವಾಗಿ ಸಫಾರಿ ಬಂದ್‌ ಮಾಡಿದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ, ಸ್ಥಳೀಯ ಉದ್ಯೋಗ ಮತ್ತು ಜೀವನೋಪಾಯಕ್ಕೆ ಹಾಗೂ ಸ್ಥಳೀಯ ಆರ್ಥಿಕತೆಯ ಉತ್ತೇಜನಕ್ಕೆ ಮತ್ತು ಹೋಟೇಲ್‌ ಉದ್ಯಮಕ್ಕೆ ಹೊಡೆತ ಬಿದ್ದಂತಾಗಿತ್ತು. ಅಲ್ಲದೆ ಸಾಫರಿ ವಾಹನಗಳ ಚಾಲಕರಿಗೂ ಉದ್ಯೋಗವಿಲ್ಲದಂತಾಗಿತ್ತು.

ಇದೀಗ ರಾಜ್ಯ ಸರ್ಕಾರ ಸಫಾರಿ ನಿರ್ಬಂಧವನ್ನು ತೆರವುಗೊಳಿಸಿ ಪೂರ್ಣ ಪ್ರಮಾಣದಲ್ಲಿ ಸಫಾರಿಗೆ ಹಸಿರು ನಿಶಾನೆ ನೀಡಿರುವುದರಿಂದ ವನ್ಯಜೀವಿಪ್ರಿಯರಿಗೆ ಗುಡ್ ನ್ಯೂಸ್ ಸಿಗುವ ಜೊತೆಗೆ ಪ್ರವಾಸೋದ್ಯಮಕ್ಕೆ ಹೊಸ ಕಳೆ ಬಂದಂತಾಗಿದೆ.

ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿಯ ವರದಿ ಶಿಫಾರಸಿನ ಅನ್ವಯ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಫಾರಿ ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಆದರೆ ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿ ಸಫಾರಿ ಆರಂಭಕ್ಕೆ ತೋರಿರುವ ಆಸಕ್ತಿಯನ್ನು ಪಶ್ಚಿಮ ಘಟ್ಟಗಳ ಉಳಿವಿಗೆ ತೋರಿಸಲಿ. ಪಶ್ಚಿಮ ಘಟ್ಟಗಳ ಉಳಿವಿಗಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಿ. ಅಲ್ಲದೆ ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯನ್ನು ಸರಿಪಡಿಸುವ ಜೊತೆಗೆ ದಿನಗೂಲಿ ಅರಣ್ಯ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಸುವ ಕೆಲಸ ಮಾಡಿಸಲಿ. ‌

-ಜೋಸೆಫ್‌ ಹೂವರ್‌, ಪರಿಸರವಾದಿ ಹಾಗೂ ವನ್ಯಜೀವಿ ಪ್ರಿಯ

Recent Articles

spot_img

Related Stories

Share via
Copy link