ನಮ್ಮ ಸರ್ಕಾರದ ಸಾಧನೆ ಕಂಡರೆ ಬಿಜೆಪಿಗರಿಗೆ ಅಸೂಯೇ : ಡಿಸಿಎಂ

ಬೆಂಗಳೂರು:

   ರಾಜ್ಯದಲ್ಲಿ ಭೀಕರ ಬರಗಾಲ ಮತ್ತು ನೀರಿನ ಸಮಸ್ಯೆ ಇರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ವಾಗ್ದಾಳಿ ನಡೆಸಿದರು.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಬೇರೆ ಕೆಲಸವಿಲ್ಲ. ಇದು ಕೇವಲ ರಾಜಕೀಯ ಆಟವಾಗಿದೆ. ಬರ ಮತ್ತು ನೀರಿನ ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಪರಿಹಾರ ಕಂಡುಕೊಂಡಿರುವುದಕ್ಕೆ ಬಿಜೆಪಿ ಅಸೂಯೆ ಪಡುತ್ತಿದೆ. ನ್ಯಾಯಾಲಯದ ಆದೇಶ ನಮ್ಮ ವಿರುದ್ಧ ಬಂದಾಗಲೂ ಕಾವೇರಿ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಇದನ್ನು ಸಹಿಸದ ಬಿಜೆಪಿಯವರು ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

    ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ನಗರದಲ್ಲಿ 7,000 ಬೋರ್‌ವೆಲ್‌ಗಳು ಬತ್ತಿ ಹೋಗಿದ್ದರೂ, ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಧಿಕಾರಿಗಳು ತಮ್ಮ ಕೈಲಾದ ಕೆಲಸ ಮಾಡುತ್ತಿದ್ದಾರೆ. ನಾವು ನೀರಿನ ಮೂಲಗಳನ್ನು ಗುರುತಿಸಿದ್ದೇವೆ ಮತ್ತು ಏನು ಮಾಡಬೇಕೋ ಅದನ್ನು ಮಾಡಲಾಗುತ್ತಿದೆ. ಬಿಜೆಪಿ ಕೇವಲ ಬೊಗಳೆ ಬಿಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. 

    ‘ಜಲಾಶಯಗಳಿಂದ ಹೊರ ಹರಿದಿರುವ ನೀರಿಗೂ ತಮಿಳುನಾಡಿಗೂ ಯಾವುದೇ ಸಂಬಂಧವಿಲ್ಲ. ಅವರು ನೀರು ಬಿಡುಗಡೆಗೆ ಬೇಡಿಕೆ ಇಟ್ಟಿದ್ದಾರಾ? ಈ ಹೊತ್ತಿನಲ್ಲಿ ತಮಿಳುನಾಡಿಗೆ ನೀರು ಬಿಡುವ ಹುಚ್ಚು ನಮಗಿದೆಯೇ? ಅವರಿಗೆ ನೀರು ಬಿಡಲು ನಮ್ಮಲ್ಲಿ ನೀರಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.

   ನಮ್ಮ ರೈತರೂ ನೀರು ಕೇಳಿಲ್ಲ. ರೈತರಿಗೆ ಕೊಡಬೇಕಾಗಿದ್ದ ನೀರನ್ನು ಈಗ ಯಾರಿಗೂ ಬಿಡುತ್ತಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದೆ ಎಂದರು.

   ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಬುಧವಾರ ತಮಿಳುನಾಡಿಗೆ ನೀರು ಬಿಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

   ‘ಸಿದ್ದರಾಮಯ್ಯನವರ ಸುಳ್ಳುಗಳು ಮುಖ್ಯಮಂತ್ರಿ ಕುರ್ಚಿಗೆ ಅವಮಾನಕರ’. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೌನವಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿದೆ ಎಂಬುದಕ್ಕೆ ತಮಿಳುನಾಡಿನ ಅಣೆಕಟ್ಟುಗಳು ನೀರಿನಿಂದ ತುಂಬಿವೆ ಎಂಬ ವರದಿಗಳು ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.

    ಹಿಂದೆಂದೂ ಕಂಡರಿಯದ ನೀರಿನ ಸಮಸ್ಯೆಯಿಂದ ಬೆಂಗಳೂರಿನ ಜನರು ಸಂಕಷ್ಟದಲ್ಲಿದ್ದು, 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವಾಗ ಸಿದ್ದರಾಮಯ್ಯ ಅವರು ತಮಿಳುನಾಡಿಗೆ ನೀರು ಬಿಡುವ ಮೂಲಕ ಕರ್ನಾಟಕದ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Recent Articles

spot_img

Related Stories

Share via
Copy link
Powered by Social Snap