ಮುಂಬಯಿ:
ಜನಪ್ರಿಯ ವೆಬ್ ಸೀರೀಸ್ ಫ್ಯಾಮಿಲಿ ಮ್ಯಾನ್ 3 ನಲ್ಲಿ ನಟಿಸಿದ್ದ ನಟ ರೋಹಿತ್ ಬಸ್ಫೋರ್ ಅವರು ಭಾನುವಾರ ಸಂಜೆ ಅಸ್ಸಾಂನ ಗರ್ಭಾಂಗಾ ಕಾಡಿನ ಜಲಪಾತದ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ವರದಿಯ ಪ್ರಕಾರ, ರೋಹಿತ್ ಕೆಲವು ತಿಂಗಳ ಹಿಂದೆ ಮುಂಬೈನಿಂದ ಗುವಾಹಟಿಗೆ ಮರಳಿದ್ದರು. ಅವರ ಕುಟುಂಬದವರ ಪ್ರಕಾರ, ರೋಹಿತ್ ಭಾನುವಾರ ಮಧ್ಯಾಹ್ನ 12:30 ರ ಸುಮಾರಿಗೆ ಸ್ನೇಹಿತರೊಂದಿಗೆ ಒಂದು ದಿನದ ವಿಹಾರಕ್ಕೆಂದು ಮನೆಯಿಂದ ಹೊರಟಿದ್ದರು. ಆದರೆ, ಸಂಜೆಯ ವೇಳೆಗೆ ಅವರೊಂದಿಗೆ ಸಂಪರ್ಕ ಕಡಿತವಾದಾಗ ಕುಟುಂಬದವರಲ್ಲಿ ಆತಂಕ ಮೂಡಿತು.
ಕೆಲವು ಗಂಟೆಗಳ ನಂತರ, ಒಬ್ಬ ಸ್ನೇಹಿತನಿಂದ ಅಪಘಾತದ ಸುದ್ದಿ ಕುಟುಂಬಕ್ಕೆ ತಲುಪಿತು. ರೋಹಿತ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈಗ, ರೋಹಿತ್‌ನ ಕುಟುಂಬವು ಇದು ಕೊಲೆಯಾಗಿರಬಹುದೆಂದು ಶಂಕಿಸಿದೆ. ಇತ್ತೀಚೆಗೆ ರೋಹಿತ್ ಮತ್ತು ಇತರ ಮೂವರ ನಡುವೆ ಒಂದು ಪಾರ್ಕಿಂಗ್ ವಿಚಾರಕ್ಕೆ ಜಗಳವುಂಟಾಗಿತ್ತು. ಈ ವೇಳೆ ರಂಜಿತ್ ಬಸ್ಫೋರ್, ಅಶೋಕ್ ಬಸ್ಫೋರ್, ಮತ್ತು ಧರಮ್ ಬಸ್ಫೋರ್ ಎಂಬ ಮೂವರು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ರೋಹಿತ್‌ನ ಸಂಬಂಧಿಕರು ಅಮರ್‌ದೀಪ್ ಎಂಬ ಜಿಮ್ ಮಾಲೀಕನ ಹೆಸರನ್ನೂ ಉಲ್ಲೇಖಿಸಿದ್ದಾರೆ. ಈತನೇ ರೋಹಿತ್‌ನನ್ನು ಔಟಿಂಗ್ ಹೋಗಲು ಆಹ್ವಾನಿಸಿದ್ದ ಎಂದು ಹೇಳಲಾಗಿದೆ.
ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ರೋಹಿತ್‌ನ ದೇಹದ ಮೇಲೆ ಹಲವು ಗಾಯದ ಗುರುತುಗಳಿವೆ ಎಂದು ದೃಢಪಡಿಸಿದ್ದಾರೆ. “ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೋಮವಾರ ಶವಪರೀಕ್ಷೆ ನಡೆಸಲಾಯಿತು. ರೋಹಿತ್‌ನ ತಲೆ, ಮುಖ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳು ಕಂಡುಬಂದಿವೆ. ನಾವು ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ, ಆದರೆ ಆರೋಪಿತರಾದ ನಾಲ್ವರು ಪರಾರಿಯಾಗಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
