ಧರ್ಮಪುರಿ
ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ನೆಲೆಸಬೇಕಾದರೆ ಇಂಡಿಯಾ ಮೈತ್ರಿಕೂಟಕ್ಕೆ ಮತ ಹಾಕುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇಲ್ಲಿನ ಜನರಿಗೆ ಕರೆ ನೀಡಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ ಸ್ಟಾಲಿನ್, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಹಣವಿಲ್ಲ ಎಂಬ ಅವರ ಹೇಳಿಕೆ ನಿಜವಾಗಿದ್ದರೆ, ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಡೆದ ಹಣ ಏನಾಯಿತು ಎಂಬುದು ಪ್ರಶ್ನೆಯಾಗಿದೆ ಎಂದರು.
‘ಮೇಡಂ, ನೀವು ಚುನಾವಣೆಗೆ ಸ್ಪರ್ಧಿಸಲು ಬಯಸಿದರೆ, ನೀವು ಜನರನ್ನು ಭೇಟಿ ಮಾಡಬೇಕು ಮತ್ತು ಜನರ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಜನ ನಿಮಗೆ ಮತ ಹಾಕುವುದಿಲ್ಲ ಎಂಬ ಫಲಿತಾಂಶ ಗೊತ್ತಿರುವುದರಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೀರಿ’ ಎಂದು ಹೇಳಿದರು.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೀತಾರಾಮನ್ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಂದಿದ್ದ ಬಿಜೆಪಿ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ. ಏಕೆಂದರೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯವಿರುವ ಹಣ ತಮ್ಮ ಬಳಿ ಇಲ್ಲ ಎಂದಿದ್ದರು.
ಡಿಎಂಕೆಯ ಧರ್ಮಪುರಿ ಅಭ್ಯರ್ಥಿ ಎ ಮಣಿ ಮತ್ತು ಕೃಷ್ಣಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಿನಾಥ್ ಪರ ಮತಯಾಚಿಸಿದ ಸ್ಟಾಲಿನ್, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಜನರು ಇಂಡಿಯಾ ಮೈತ್ರಿಕೂಟಕ್ಕೆ ಮತ ನೀಡಬೇಕು. ನೀವು ಅದನ್ನು ಮಾಡುತ್ತೀರಾ?. ನೀವು ಇಂಡಿಯಾ ಮೈತ್ರಿಕೂಟಕ್ಕೆ ಮತ ಹಾಕಲು ಸಿದ್ಧರಿದ್ದೀರಾ? ಎಂದು ಇಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಅವರು ಪ್ರಶ್ನಿಸಿದರು.