ನವದೆಹಲಿ:
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘನೆ ಪ್ರಕರಣದಲ್ಲಿ ಮಾರ್ಚ್ 28 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ), ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದನಿ ಅವರಿಗೆ ಹೊಸ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಮೊಯಿತ್ರಾ ವಿರುದ್ಧದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಆರೋಪಗಳ ಕುರಿತು ತನಿಖೆ ನಡೆಸುವಂತೆ ಭ್ರಷ್ಟಾಚಾರ-ನಿಗ್ರಹ ಒಂಬುಡ್ಸ್‌ಮನ್ ಲೋಕಪಾಲ್ ಸಿಬಿಐಗೆ ನಿರ್ದೇಶನ ನೀಡಿದ ಕೆಲವು ದಿನಗಳ ನಂತರ, ಶನಿವಾರ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಪ್ರಶ್ನೆಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕಿಯ ನಿವಾಸದ ಮೇಲೆ ದಾಳಿ ನಡೆಸಿತ್ತು.
ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದಕ್ಕೆ ಲಂಚ ಪಡೆದ ಆರೋಪದ ಮೇಲೆ ಮಹುವಾ ಮೊಯಿತ್ರಾ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟಿಸಲಾಗಿದೆ.
ಮೊಯಿತ್ರಾ ಅವರು ಹಣಕ್ಕಾಗಿ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದಾರೆ.