ಬಾಲ್‍ಬ್ಯಾಡ್‍ಮಿಂಟನ್ ಪಂದ್ಯಾವಳಿಗೆ ಚಾಲನೆ

ಚಿತ್ರದುರ್ಗ:
              ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಬಹುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕ್ರೀಡಾಪಟುಗಳಿಗೆ ತಿಳಿಸಿದರು.
               ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ ದಾವಣಗೆರೆ, ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ಸರ್ಕಾರಿ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರಕಾಲೇಜು ಪುರುಷರ ಬಾಲ್‍ಬ್ಯಾಡ್‍ಮಿಂಟನ್ ಪಂದ್ಯಾವಳಿ ಹಾಗೂ ಪುರಷ ಮತ್ತು ಮಹಿಳೆಯರ ವಿಶ್ವವಿದ್ಯಾನಿಲಯ ಬಾಲ್‍ಬ್ಯಾಡ್‍ಮಿಂಟನ್ ತಂಡದ ಆಯ್ಕೆ ಉದ್ಘಾಟಿಸಿ ಮಾತನಾಡಿದರು.
               ಹತ್ತಾರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಏಷಿಯನ್ ಗೇಮ್ಸ್‍ನಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚಿನ ಪದಗಳನ್ನು ಬಾಚಿಕೊಂಡಿರುವುದು ನಿಜಕ್ಕೂ ಎಲ್ಲರಿಗೂ ಖುಷಿಕೊಟ್ಟಿದೆ. ಯೂನಿವರ್ಸಿಟಿ ಮಟ್ಟದ ಕ್ರೀಡೆಯಲ್ಲಿ ನೀವುಗಳು ತೊಡಗಿಕೊಂಡು ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಎಂದು ಹಾರೈಸಿದರು.
               ದಾವಣಗೆರೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ಎನ್.ರಾಜ್‍ಕುಮಾರ್ ಮಾತನಾಡಿ ಬಾಲ್‍ಬ್ಯಾಡ್‍ಮಿಂಟನ್ ಹುಟ್ಟಿಕೊಂಡಿದ್ದು ಮೊದಲು ತಂಜಾವೂರಿನಲ್ಲಿ. ಕೇವಲ ರಾಜಮನೆತನದವರು ಮಾತ್ರ ಮನರಂಜನೆಗಾಗಿ ಆಡುತ್ತಿದ್ದ ಈ ಆಟ ಈಗ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ ಅಂತಿಮ ಪದವಿಯಲ್ಲಿರುವ ವಿದ್ಯಾರ್ಥಿಗಳು ನೀವು ಕಟ್ಟಿ ಬೆಳೆಸಿದ ತಂಡ ನಿಮ್ಮ ನಂತರದಲ್ಲಿ ಬರುವ ಕ್ರೀಡಾಪಟುಗಳಿಗೆ ಅನುಕೂಲವಾಗಬೇಕು. ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಸಲಹೆ ನೀಡಿದರು.
ಸರ್ಕಾರಿ ಕಲಾ ಕಾಲೇಜು ಪ್ರತಿ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ಕ್ರೀಡೆಗಳನ್ನು ನಡೆಸಿಕೊಂಡು ಬರುತ್ತಿರುವುದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕ್ರೀಡಾಪಟುಗಳಿಗೆ ನಿಜವಾಗಿಯೂ ಉತ್ತೇಜನ ನೀಡಿದಂತಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
               ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಟಿ.ಎಲ್.ಸುಧಾಕರ ಮಾತನಾಡಿ ಕ್ರೀಡೆಯನ್ನು ಸೋಲು-ಗೆಲುವಿಗಿಂತಲೂ ಮುಖ್ಯವಾಗಿ ಆಶಾಧಾಯಕ, ಸ್ಪೂರ್ತಿಧಾಯಕವಾಗಿ ತೆಗೆದುಕೊಳ್ಳಬೇಕು. ಎಲ್ಲಿಯೂ ಜಗಳ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ತೀರ್ಪುಗಾರರು ನೀಡುವ ತೀರ್ಪುಗಳು ಕೂಡ ಪಾರದರ್ಶಕವಾಗಿರಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ಜೆ.ಸಾಧಿಕ್ ವೇದಿಕೆಯಲ್ಲಿದ್ದರು.
ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಡುವ ಕಾಲೇಜುಗಳಿಂದ 21 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.