ಬಿಜೆಪಿ ಆಡಳಿತದಲ್ಲಿ ಕರ್ನಾಟಕಕ್ಕೆ ನಂಬರ್ ಒನ್ ಸ್ಥಾನ: ನರೇಂದ್ರ ಮೋದಿ

ಬೆಂಗಳೂರು

     ಬಿಜೆಪಿ ಆಡಳಿತದಲ್ಲಿ ಇಡೀ ದೇಶದಲ್ಲೇ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ನವಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಕರ್ನಾಟಕದ ವಿಕಾಸ ಮಾಡಲು ಬದ್ಧ. ರಾಜ್ಯದ ಮಾನ ಮರ್ಯಾದೆಗೆ ಯಾವುದೇ ರೀತಿಯ ದಕ್ಕೆಯಾಗಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

     ಪ್ರಪಂಚದಲ್ಲಿ ಭಾರತವನ್ನು ಆರ್ಥಿಕವಾಗಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತರುವ ಕೆಲಸವನ್ನು ಕೇವಲ ಮೋದಿ ಮಾಡಲು ಆಗುವುದಿಲ್ಲ. ನೀವು ನಿಮ್ಮ ಮತ ಹಾಕುವ ಮೂಲಕ ಮಾಡಬೇಕಿದೆ. ಕಾಂಗ್ರೆಸ್ ನವರು ಸುಳ್ಳುಗಳೇ ತುಂಬಿರುವ ಗ್ಯಾರಂಟಿ ಕಾರ್ಡ್ ಹಿಡಿದು ಬಂದಿದ್ದಾರೆ. ಕಾಂಗ್ರೆಸ್ ಗೆ ತನ್ನ ಅಸ್ತಿತ್ವದ ಬಗ್ಗೆಯೆ ಭರವಸೆ ಇಲ್ಲ. ಹೀಗಿರುವಾಗ ಅವರು ನೀಡುವ ಗ್ಯಾರಂಟಿಗೆ ಅರ್ಥವೇ ಇಲ್ಲ. ತಾವು ಲೂಟಿ ಮಾಡುವ ಯೋಚನೆಯಲ್ಲಿ ಇಂತಹ ಯೋಜನೆ ತರುತ್ತಾರೆ ಎಂದು ಎಚ್ಚರಿಸಿದರು.

      ಈ ಹಿಂದೆ ಗರೀಬಿ ಹಠಾವೋ ಎಂದು ಹೇಳುತ್ತಾ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಸಾಲ ಮನ್ನಾ ಯೋಜನೆ ತರುತ್ತೇವೆ; ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು. ಆದರೆ ಇಂದು ಕಾಂಗ್ರೆಸ್ ಆಡಳಿತವಿರುವ ಯಾವ ರಾಜ್ಯದಲ್ಲೂ ಆ ಯೋಜನೆ ಜಾರಿಗೊಳಿಸಿಲ್ಲ. ಸುಳ್ಳು ಭರವಸೆ ನೀಡಿ ಯೋಜನೆ ತಂದು ಶೇ. 85ರಷ್ಟು ಕಮಿಷನ್ ಹಣ ಪಡೆದು ತಾವು ಉದ್ಧಾರವಾಗುವ ಹುನ್ನಾರ ನಡೆಸಿದ್ದಾರೆ. ಇದನ್ನು ಮನಗಂಡು ಕಾಂಗ್ರೆಸ್ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕಿದೆ ಎಂದು ಎಚ್ಚರಿಸಿದರು.

     ವೈಭವದ ವಿಜಯನಗರ ಸಾಮ್ರಾಜ್ಯದ ವಿರೂಪಾಕ್ಷ ಸ್ವಾಮಿ, ಉಗ್ರ ನರಸಿಂಹ ಸ್ವಾಮಿ ಹಾಗೂ ಹುಲಿಗೆಮ್ಮ ದೇವಿಗೆ ನನ್ನ ಸಹಸ್ರ ಪ್ರಣಾಮಗಳು. ಹನುಮಂತನ ಪವಿತ್ರ ಭೂಮಿಗೆ ಪ್ರಣಾಮ ಸಲ್ಲಿಸಲು ಆಗಮಿಸಿದ್ದೇನೆ. ಇಂತಹ ಪವಿತ್ರ ಭೂಮಿಯಲ್ಲಿ ಹನುಂತನ ಭಜನೆ ನಿಲ್ಲಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ರಾಮ ಜನ್ಮಭೂಮಿ ವಿಷಯದಲ್ಲೂ ಕಾಂಗ್ರೆಸ್ ತೊಂದರೆ ನೀಡಿತ್ತು. ಈಗ ಹನುಮಂತನ ವಿಷಯದಲ್ಲೂ ಅದೇ ರೀತಿ ನಡೆದುಕೊಳ್ಳಲು ಮುಂದಾಗಿದೆ. ಕಾಂಗ್ರೆಸ್ ಯಾಕೆ ಹೀಗೆ ನಡೆದುಕೊಳ್ಳುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ನುಡಿದರು.

     ವಿಜಯನಗರ ಸಾಮ್ರಾಜ್ಯದ ಇತಿಹಾಸ ಭಾರತದ ಗೌರವವಾಗಿದೆ. ಶ್ರೀಕೃಷ್ಣದೇವರಾಯ ತನ್ನ ಆಡಳಿತದ ಮೂಲಕ ಕರ್ನಾಟಕದ ಸಂಸ್ಕೃತಿ, ನಾಗರಿಕತೆಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಜಗತ್ತಿಗೆ ವಿಜಯನಗರ ಸಾಮ್ರಾಜ್ಯ ಪ್ರೇರಣೆ ನೀಡಿದೆ. ಅಂದಿನ ಕಾಲದಲ್ಲೇ ಪ್ರಪಂಚದ ಬೇರೆ ಬೇರೆ ದೇಶಗಳೊಡನೆ ಸಂಬಂಧ ಹೊಂದಿದ್ದರು. ಅವರು ರಾಜ್ಯದ ಪ್ರತಿ ನಾಗರಿಕನ ಬಗ್ಗೆ ಚಿಂತನೆ ಮಾಡಿದ್ದರು, ಗಮನ ಕೊಟ್ಟಿದ್ದರು. ವಿಜಯನಗರ ನೂತನ ಜಿಲ್ಲೆ ಕರ್ನಾಟಕದ ಪುರಾಣ ಹೊಂದಿರುವ ಜಿಲ್ಲೆಯಾಗಿದೆ. ಪುರಾಣದಲ್ಲಿ ಈ ಕ್ಷೇತ್ರದ ಉಲ್ಲೇಖವಿದೆ. ವಿಜಯನಗರವನ್ನು ಬಿಜೆಪಿ ಸರ್ಕಾರ ಇದನ್ನು ನೂತನ ಜಿಲ್ಲೆಯನ್ನಾಗಿ ಮಾಡಿದೆ. ಈ ಭಾಗದಲ್ಲಿ ಬಹಳ ವೇಗವಾಗಿ ಅಭಿವೃದ್ಧಿ ಕಾರ್ಯ ನಡೆಯಬೇಕಿದೆ. ಹೀಗಾಗಿ ವಿಜಯನಗರ ಜಿಲ್ಲೆ ಹೇಳುತ್ತಿದೆ. ಈ ಬಾರಿ ಬಿಜೆಪಿ ಸರ್ಕಾರ ಎಂದು ಹೇಳುತ್ತಿದೆ ಎಂದು ತಿಳಿಸಿದರು.

     ಕಾಂಗ್ರೆಸ್ ನವರ ಆಡಳಿತದಿಂದಾಗಿ ಹಳ್ಳಿ ಮತ್ತು ನಗರದ ಮಧ್ಯೆ ಬಹಳ ದೊಡ್ಡ ಕಂದಕ ನಿರ್ಮಾಣ ಮಾಡಿದೆ. ಇದನ್ನು ಕಡಿಮೆ ಮಾಡಲು ನಾವು ಕ್ರಮ ತೆಗೆದುಕೊಂಡಿದ್ದೇವೆ. ನಗರದ ಪ್ರದೇಶದ ಸೌಲಭ್ಯಗಳು ಗ್ರಾಮೀಣ ಭಾಗದಲ್ಲೂ ದೊರಕುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ಬಹಳ ದಿನಗಳಿಂದ ನಮ್ಮ ರೈತರ ಬೇಡಿಕೆ ಇದೆ. ಅವರ ಜಮೀನಿಗೆ ಜಮೀನಿಗೆ ನೀರಾವರಿ ಆಗಬೇಕಿತ್ತು. ಈ ಭಾಗದಲ್ಲಿ 70ಕ್ಕೂ ಹೆಚ್ಚು ಕೆರೆಗಳ ನವೀಕರಣ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಂಡಿದೆ. ನೂತನ ವಿಜಯನಗರ ಜಿಲ್ಲೆಗೆ ಕೃಷಿ ಕಾಲೇಜನ್ನು ಮಂಜೂರು ಮಾಡಿದ್ದೇವೆ. ಇದರಿಂದಾಗಿ ಈ ಭಾಗದ ಯುವಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ದೊರಕಲಿದೆ. ಆರೋಗ್ಯ, ಶಿಕ್ಷಣ ಸೌಲಭ್ಯ ನೀಡುವ ಮೂಲಕ ಗ್ರಾಮೀಣ ನಗರದ ಮಧ್ಯದ ಅಂತರ ಕಡಿಮೆ ಮಾಡುತ್ತೇವೆ ಎಂದು ವಿವರಿಸಿದರು.

      ಐತಿಹಾಸಿಕ ಸ್ಥಳ ಹಂಪಿ ಬಗ್ಗೆ ಕೇವಲ ಭಾರತವಲ್ಲ ಇಡೀ ಜಗತ್ತು ಅಭಿಮಾನ ಪಡುತ್ತದೆ. ಆದರೆ ಗುಲಾಮಿ ಮನಸ್ಸು ಹೊಂದಿರುವ ಕಾಂಗ್ರೆಸ್ ಈ ಪರಂಪರೆಯನ್ನು ಗೌರವಿಸಲಿಲ್ಲ. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ 50 ರುಪಾಯಿ ಮುಖಬೆಲೆಯ ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರ ಬಳಸಿದ್ದೇವೆ. ಪ್ರವಾಸಿ ತಾಣಗಳ ಯೋಜನೆ ಜಾರಿಗೆ ತಂದಿದ್ದೇವೆ. ಇದರಲ್ಲಿ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ ಸೇರಿಸಿ ಪ್ರವಾಸಿ ಸರ್ಕಿಟ್ ಮಾಡಿದ್ದೇವೆ. ಇದರಿಂದಾಗಿ ರಾಜ್ಯದ ಪ್ರವಾಸೋದ್ಯಮ ಬೆಳೆದು ಯುವಕರಿಗೆ ನೌಕರಿ ದೊರಕಲಿದೆ ಎಂಬ ವಿಶ್ವಾಸ ನಮ್ಮದು ಎಂದು ಕಿವಿಮಾತು ಹೇಳಿದರು.

       ನಮ್ಮ ಡಬಲ್ ಎಂಜಿನ್ ಸರ್ಕಾರದಿಂದ ಸಮಾಜಿಕ ನ್ಯಾಯ, ಸಾಮಾಜಿಕ ಸಶಕ್ತೀಕರಣ ಪ್ರಾಮುಖ್ಯತೆ ಪಡೆದಿದೆ. ಬಡವರ, ರೈತರ, ದುರ್ಬಲರ ಕಲ್ಯಾಣ ಕಾಣುತ್ತಿದೆ. ಪಿಎಂ ಕಿಸಾನ್ ಬೆಳೆವಿಮೆ ಬಹಳ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಸಹಕಾರಿಯಾಗಿದೆ. ಅನೇಕ ಸಲ ಅತಿವೃಷ್ಟಿಯಿಂದ ರೈತರಿಗೆ ತೊಂದರೆಯಾಗಿದೆ. ರೈತರ ಸಂಕಷ್ಟ ತಪ್ಪಿಸಲು ವಿಮಾ ಯೋಜನೆ ಜಾರಿಗೊಳಿಸಿದ್ದೇವೆ ಎಂದರು.

      ನಮ್ಮ ಸರ್ಕಾರ ದೇಶದಲ್ಲಿ 11 ಕೋಟಿ ರೈತರಿಗೆ ಕಿಸಾನ್ ಸಮ್ಮಾನ ನಿಧಿಯ ಲಾಭ ನೀಡಿದೆ. ಇದರಲ್ಲಿ ಶೇ. 60ರಷ್ಟು ಎಸ್ಸಿ ಎಸ್ಟಿ ಒಬಿಸಿ ಸಮುದಾಯದ ರೈತರಿಗೆ ಆಗಿದೆ. ಇದುವರೆಗೆ 2.50 ಲಕ್ಷ ಕೋಟಿ ಹಣ ನೀಡಿದ್ದೇವೆ. ಕರ್ನಾಟಕದಲ್ಲಿ 18 ಸಾವಿರ ಕೋಟಿ ಹಣವನ್ನು ರೈತರಿಗೆ ನೇರವಾಗಿ ಅವರ ಖಾತೆಗೆ ತಲುಪಿಸಿದ್ದೇವೆ. ಈ ಬಾರಿಯ ಸರ್ಕಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳಲು ಬಯಸುತ್ತೇನೆ ಎಂದು ತಿಳಿಸಿದರು. ರಾಜ್ಯದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೇಂದ್ರಕ್ಕೆ ರಾಜ್ಯದ ರೈತರ ಪಟ್ಟಿ ಕಳುಹಿಸದೆ ಜನರಿಗೆ ಮೋಸ ಮಾಡಿದ್ದನ್ನು ಪ್ರಧಾನಿಯವರು ಉಲ್ಲೇಖಿಸಿದರು. ರೈತರಿಗೆ ಕಾಂಗ್ರೆಸ್ ಜೆಡಿಎಸ್ ಮಾಡಿದ ಅನ್ಯಾಯವನ್ನು ಮರೆಯಬಾರದು ಎಂದು ಗಮನ ಸೆಳೆದರು.

      ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ 50 ಲಕ್ಷ ರೈತರಿಗೆ ಹಣ ದೊರಕಿತು. ಕೇಂದ್ರ ಸರ್ಕಾರದ 6 ಸಾವಿರದ ಜೊತೆಗೆ ರಾಜ್ಯ ಸರ್ಕಾರ 4 ಸಾವಿರ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿತು. ಡಬಲ್ ಎಂಜಿನ್ ಸರ್ಕಾರ ಇದ್ದ ಕಾರಣ ರೈತರಿಗೆ ಹತ್ತು ಸಾವಿರ ಹಣ ದೊರಕುತ್ತಿದೆ. ಹೀಗಾಗಿ ಡಬಲ್ ಎಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೆ ಎಲ್ಲರಿಗೂ ಅಭಿವೃದ್ಧಿಯ ಲಾಭ ಸಿಗಲಿದೆ ಎಂದರು.

      ಕಾಂಗ್ರೆಸ್ ದುರಂಹAಕಾರಿ ಪಕ್ಷ. ದೇಶದ ಗ್ರಾಪಂನಿಂದ ಪಾರ್ಲಿಮೆಂಟ್ ವರೆಗೂ ಅವರದೇ ಆಡಳಿತ ಇತ್ತು. ಇವರ ದುರಂಹAಕಾರ ನೋಡಿ ದೇಶದ ಜನ ಮೂರು ರಾಜ್ಯಗಳಲ್ಲಿ ಮಾತ್ರ ಇವರಿಗೆ ಅಧಿಕಾರ ನೀಡಿದೆ. ಈ ಮೂರು ರಾಜ್ಯದಲ್ಲಿ ಕಾಂಗ್ರೆಸ್ ನವರ  ಹಸಿವು ತುಂಬುತ್ತಿಲ್ಲ. ಹಾಗಾಗಿ ಕರ್ನಾಟಕದ ಜನರ ಹಣ ಲೂಟಿ ಮಾಡಲು ಮುಂದಾಗಿದ್ದಾರೆ. ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಳ್ಳಲು ಮುಂದಾಗಿದೆ. ಹೀಗಾಗಿ ಕರ್ನಾಟಕದ ಜನತೆ ಎಚ್ಚರದಿಂದ ಇದ್ದು ಅವರನ್ನು ಅಧಿಕಾರದಿಂದ ದೂರ ಇಡಬೇಕಿದೆ ಎಂದು ತಿಳಿಸಿದರು.

     ಸಶಕ್ತ ಭಾರತದ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರ ಬಹಳ ದೊಡ್ಡದಿದೆ. ಹೀಗಾಗಿ ಕರ್ನಾಟಕದಲ್ಲಿ ಪ್ರವಾಸ, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ವಿಷಯದಲ್ಲಿ ಎಲ್ಲಾ ಜನತೆಯನ್ನು ಮೇಲಕ್ಕೆತ್ತುವ ಕೆಲಸವಾಗಬೇಕಿದೆ. ಹೀಗಾಗಿ ಕಾಂಗ್ರೆಸ್ ಜೆಡಿಎಸ್‌ನವರ ಮೋಸಕ್ಕೆ ಒಳಗಾಗದೆ ಬಿಜೆಪಿಗೆ ಬೆಂಬಲಿಸಿ ದೇಶವನ್ನು ಮುನ್ನಡೆಸಬೇಕಿದೆ ಎಂದರು.

     ಈ ಸಮಾವೇಶದಲ್ಲಿ ಸಂಸದ ದೇವೇಂದ್ರಪ್ಪ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸಚಿವ ಹಾಲಪ್ಪ ಆಚಾರ್, ಸಚಿವ ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಬಳ್ಳಾರಿ ವಿಭಾಗ ಪ್ರಭಾರಿ ಸಿದ್ದೇಶ್ ಯಾದವ್, ಕೊಪ್ಪಳ ಕಾರ್ಯಾಧ್ಯಕ್ಷ ಗಿರೇಗೌಡ, ವಿಜಯನಗರ ಅಭ್ಯರ್ಥಿ ಸಿದ್ಧಾರ್ಥ ಸಿಂಗ್, ಎಚ್.ಬಿ. ಹಳ್ಳಿಯ ಬಲ್ಲಾಹುಣ್ಸಿ ರಾಮಣ್ಣ, ಹಡಗಲಿಯ ಕೃಷ್ಣ ನಾಯ್ಕ್, ಕೂಡ್ಲಿಗಿಯ ಲೋಕೇಶ್ ನಾಯಕ್, ಕೊಪ್ಪಳದ ಮಂಜುಳಾ ಕರಡಿ, ಗಂಗಾವತಿಯ ಪರಣ್ಣ ಮುನವಳ್ಳಿ, ವಿಜಯನಗರ ಪ್ರಬಾರಿ ಪ್ರಭು ಕಪ್ಪಗಲ್, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap