ಚಿಕ್ಕನಾಯಕನಹಳ್ಳಿ:
ಪಂಚಾಯಿತಿ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಬಡವರ ಮನೆಗಳ ಗ್ರಾಂಟ್ ಹಾಗೂ ಶೌಚಾಲಯದ ಬಿಲ್ಲುಗಳನ್ನು ಫಲಾನುಭವಿಗಳಿಗೆ ಪಾವತಿ ಮಾಡದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ತಿಳಿಸಿದರು.
ತಾಲ್ಲೂಕಿನ ಜೆ.ಸಿ.ಪುರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ತಾಲ್ಲೂಕಿನ 28 ಗ್ರಾಮಪಂಚಾಯಿತಿಗಳ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ (ಓ.ಡಿ.ಎಫ್) ಎಂದು ಘೋಷಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಪಂಚಾಯ್ತಿಗಳ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ 2012ರ ಸಮೀಕ್ಷೆ ಮಾಡಿರುವಂತಹ ವರದಿಗೆ ಎರಡು ತಿಂಗಳ ಮುಂಚೆಯೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಬಹುದಾಗಿತ್ತು. ಆದರೆ ನಾವೇ ತಡವಾಗಿದ್ದೇವೆ. 2012ರ ಸಮೀಕ್ಷೆಯಂತೆ ಗುರಿ ತಲುಪಿದ್ದರು. 17-18ನೇ ಸಾಲಿನವರೆಗೆ ನಿರ್ಮಾಣವಾಗಿರುವಂತಹ ಮನೆಗಳು ಇನ್ನು ಹೆಚ್ಚಾಗಿವೆ. ಅದರಂತೆ ನಮ್ಮ ಕೆಲಸ ಮುಗಿಯಿತು ಎಂದುಕೊಳ್ಳದೆ ಎಲ್ಲಾ ಪಂಚಾಯಿತಿಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಹಾಗೇಯೇ ಪಂಚಾಯಿತಿಯ ಅಧಿಕಾರಕ್ಕಾಗಿ ಸದಸ್ಯರಾಗಲು ಹಾತೊರೆಯುವಂತಹವರು ತಮಗೆ ಸಿಕ್ಕಿರುವ ಅಧ್ಯಕ್ಷ ಸ್ಥಾನ, ಸದಸ್ಯ ಸ್ಥಾನದಿಂದ ಸಮಾಜ ಸೇವೆಯನ್ನು ಮಾಡುವ ಮೂಲಕ ಉತ್ತಮ ಕೆಲಸ ಮಾಡಿ ಎಂದ ಅವರು, ಅವಕಾಶ ಸಿಕ್ಕಿದವರು ಸಮರ್ಥರು, ಅವಕಾಶ ಸಿಗದವರು ಅಸಮರ್ಥರು ಎಂದರ್ಥವಲ್ಲ. ಯಾರು ಜನರ ಕಷ್ಟಗಳನ್ನು ತಿಳಿದು ಅವರ ಸೇವೆ ಮಾಡುತ್ತಾರೊ ಅವರೇ ಸಮರ್ಥರು, ಬಡತನ ಎಂಬುದು ಶಾಪವಲ್ಲ. ಅದನ್ನು ಶ್ರಮದಿಂದ ನಿವಾರಿಸಿಕೊಳ್ಳಬೇಕು, ನಾವು ಸ್ವಾಭಿಮಾನದಿಂದ ಬದುಕಿದರೆ ಅದೇ ಶ್ರೇಷ್ಠ ಎಂದರು.
ಇಂದು ನಾವು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಶೌಚಾಲಯವನ್ನು ಬಳಸುವಂತೆ ಮಾಡಬೇಕು, ಎಲ್ಲಾ ಪಂಚಾಯಿತಿಯವರು ಎನ್‍ಆರ್‍ಇಜಿ ಕಾಮಗಾರಿಯನ್ನು ಹೆಚ್ಚು ನಿರ್ವಹಿಸುವ ಮೂಲಕ ರಸ್ತೆ, ಚರಂಡಿ, ಅಂಗನವಾಡಿ ಕಟ್ಟಡ, ಶಾಲಾ ಕಟ್ಟಡ ನಿರ್ಮಾಣದಂತಹ ಕೆಲಸಗಳನ್ನು ಮಾಡಿ ಕನಿಷ್ಠ ಒಂದು ಪಂಚಾಯ್ತಿಗೆ 30 ರಿಂದ 40 ಲಕ್ಷ ರೂಪಾಯಿ ಕೆಲಸ ಮಾಡಬೇಕು ಎಂದ ಅವರು, ಯಾವುದೇ ಸಾಮಾಜಿಕ ಲೆಕ್ಕ ಪರೀಕ್ಷೆಗೆ ಹೆದರದೇ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು.
ತಾ.ಪಂ. ಸದಸ್ಯ ಸಿಂಗದಹಳ್ಳಿ ರಾಜ್‍ಕುಮಾರ್ ಮಾತನಾಡಿ, ಕೇವಲ ಶೌಚಾಲಯಗಳನ್ನು ಕಟ್ಟಿಸಿದರೆ ಸಾಲದು ಅದನ್ನು ಸಮರ್ಪಕವಾಗಿ ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದ ಅವರು, ಬಯಲು ಶೌಚಾಲಯದಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಅದನ್ನು ಈ ಮೂಲಕ ತಡೆಯಬಹುದು, ಗಾಂಧೀಜಿಯವರ ಪರಿಕಲ್ಪನೆಯಂತೆ ಗ್ರಾಮಗಳ ಉದ್ಧಾರ ದೇಶದ ಉದ್ಧಾರ ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುವಂತೆ ತಿಳಿಸಿದರು.
ಪ್ರಭಾರ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಆರ್.ಹರೀಶ್ ಮಾತನಾಡಿ, ದೇಶದಲ್ಲಿ ಮೊದಲನೇ ಪಂಚವಾರ್ಷಿಕ ಯೋಜನೆಯಿಂದಲೇ ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತಾ ಬರಲಾಗಿತ್ತು. ಈಗ ಹಂತ ಹಂತವಾಗಿ ಸಂಪೂರ್ಣ ಸ್ವಚ್ಛತಾ ಆಂದೋಲನ, ನಿರ್ಮಲಭಾರತ್ ಯೋಜನೆಯಂತಹ ವಿವಿಧ ಯೋಜನೆಗಳ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. 2014ರಲ್ಲಿ ಸ್ವಚ್ಛ ಭಾರತ್ ಮಿಷನ್ ಜಾರಿಯಾಗಿದ್ದು ಇದರ ಪ್ರಕಾರ ಬಯಲು ಶೌಚ ನಿರ್ಮೂಲನೆ, ಶುದ್ಧ ನೀರಿನ ವ್ಯವಸ್ಥೆ, ಘನ ತ್ಯಾಜ್ಯ ವಿಲೇವಾರಿ ಸೇರಿದಂತೆ ನೈರ್ಮಲ್ಯೀಕರಣಕ್ಕಾಗಿ ಮಾನಸಿಕ ಬದಲಾವಣೆಯಂತಹ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ. ತಾಲ್ಲೂಕಿನ 28 ಗ್ರಾ.ಪಂ.ಗಳಲ್ಲಿ ಒಟ್ಟು 41308 ಕುಟುಂಬಗಳಿದ್ದು ಇದುವರೆಗೆ 40733 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಲಾಗಿದೆ. ಶೇಕಡ 98.63ರಷ್ಟು ಗುರಿ ಸಾಧನೆ ಮಾಡಿದ್ದು ಬಾಕಿ ಉಳಿದಿರುವ 571 ಕುಟುಂಬಗಳನ್ನು ಹಂತಹಂತವಾಗಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಮಂಜುಳಮ್ಮ, ಎಸ್.ಟಿ.ಮಹಾಲಿಂಗಯ್ಯ, ತಾ.ಪಂ.ವ್ಯವಸ್ಥಾಪಕ ಟಿ.ಕೆ.ಶ್ರೀನಿವಾಸ್ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾ.ಪಂ. ಪಿಡಿಒ ಅಧಿಕಾರಿಗಳು, ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
