ಕರ್ತವ್ಯ ನಿರ್ಲಕ್ಷತೆ ತೋರುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಡಿಸಿಎಂ ಸೂಚನೆ

ತುಮಕೂರು

    ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ವಿಳಂಬ ಮಾಡಿ ಕರ್ತವ್ಯ ನಿರ್ಲಕ್ಷತೆ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ವಿವಿಧ ಇಲಾಖೆಗಳ ಅಭಿವೃದ್ಧಿಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯ ಯಾವುದೇ ಗ್ರಾಮದಿಂದ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಜನರಿಂದ ದೂರು ಬಾರದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಕೊಳವೆ ಬಾವಿ ಕೊರೆಯುವುದು, ಪಂಪ್‍ಸೆಟ್/ಮೋಟಾರ್ ಅಳವಡಿಕೆ, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಕೊಳವೆಬಾರಿ ದುರಸ್ತಿ, ಮತ್ತಿತರ ಕುಡಿಯುವ ನೀರಿನ ಕಾಮಗಾರಿಗಳನ್ನು ಯಾವುದೇ ಕ್ರಿಯಾ ಯೋಜನೆ, ಮೇಲಧಿಕಾರಿಗಳ ಅನುಮತಿಗೆ ಕಾಯದೇ ತಕ್ಷಣವೇ ಕೈಗೊಂಡು ಪರಿಹಾರ ಒದಗಿಸಬೇಕು ಎಂದರಲ್ಲದೆ ಚುನಾವಣೆ ಮತ್ತಿತರ ಕಾರಣಗಳಿಂದ ಸ್ಥಗಿತಗೊಂಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

     ಜಿಲ್ಲೆಯ ಪಾವಗಡ, ಕೊರಟಗೆರೆ, ತುಮಕೂರು, ಮಧುಗಿರಿ, ಶಿರಾ ತಾಲೂಕುಗಳಲ್ಲಿ ಮಾತ್ರ ಕೊಳವೆ ಬಾವಿಗಳನ್ನು ಕೊರೆಯಲು ಆದ್ಯತೆ ನೀಡಲಾಗುತ್ತಿದ್ದು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ತಾಲೂಕುಗಳಿಗೆ ಆದ್ಯತೆ ನೀಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ ಹಾಗೂ ತಿಪಟೂರು ಶಾಸಕ ಬಿ.ಸಿ. ನಾಗೇಶ್, ತುರುವೇಕೆರೆ ಶಾಸಕ ಎ.ಎಸ್. ಜಯರಾಂ ಜಂಟಿಯಾಗಿ ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ಬೇಧ-ಭಾವ ತೋರದೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಗೂ ಒಂದೇ ರೀತಿ ಆದ್ಯತೆ ನೀಡಬೇಕು ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಇಫ್ತಿಕಾರ್ ಅಹಮದ್ ಅವರಿಗೆ ನಿರ್ದೇಶನ ನೀಡಿದರು.

     ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಮಾಂಕಾಳಪ್ಪ ಮಾತನಾಡಿ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬಸವ/ಅಂಬೇಡ್ಕರ್/ಪ್ರಧಾನಮಂತ್ರಿ ಆವಾಜ್/ದೇವರಾಜ್ ಅರಸ್ ವಸತಿ ಯೋಜನೆಯಡಿ 17450 ವಸತಿಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಗುರಿ ಹೊಂದಲಾಗಿತ್ತು. ಈ ಪೈಕಿ 14464 ವಸತಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಶೇ. 82ರಷ್ಟು ಸಾಧನೆ ಮಾಡಲಾಗಿದೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು 543 ಕೋಟಿ ರೂ.ಗಳ ಅನುದಾನ ಅಗತ್ಯವಿರುವ ಬಗ್ಗೆ ಸರ್ಕಾರಕ್ಕೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದಾಗ ಡಾ|| ಪರಮೇಶ್ವರ್ ಅವರು ಅಗತ್ಯವಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

     ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಬಿ. ಕೃಷ್ಣಪ್ಪ ಮಾತನಾಡಿ ನರೇಗಾ ಯೋಜನೆಯಡಿ 2019-20ನೇ ಸಾಲಿಗಾಗಿ 75ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿಯಿದ್ದು, ಕೇವಲ ಎರಡೇ ತಿಂಗಳಲ್ಲಿ 9,10,000 ಮಾನವ ದಿನಗಳನ್ನು ಸೃಜಿಸಲಾಗಿದೆ. ಕಳೆದ ವರ್ಷ ನಿಗಧಿಯಾಗಿದ್ದ 50ಲಕ್ಷ ಮಾನವ ದಿನಗಳಿಗೆ 51ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಸಭೆಗೆ ವಿವರಿಸಿದರು.

      ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದ ಪರಮೇಶ್ವರ್ ಅವರು ನರೇಗಾ ಯೋಜನೆಯ ಕಾಮಗಾರಿಗಳನ್ನು ಮಾರ್ಗಸೂಚಿಯನ್ವಯ ಕೂಲಿ ಹಾಗೂ ಸಾಮಗ್ರಿಗಳನ್ನು 60ಃ40 ಅನುಪಾತದಲ್ಲಿ ಕೈಗೊಳ್ಳಬೇಕು. ಕಾಮಗಾರಿ ಕೈಗೊಳ್ಳುವಾಗ ಅನುಪಾತದಲ್ಲಿ ವ್ಯತ್ಯಾಸವಾಗಿದೆ ಎಂದು ಶಾಸಕರಿಂದ ದೂರುಗಳು ಕೇಳಿ ಬರುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ನರೇಗಾ ಯೋಜನೆಯ ಅನುದಾನವನ್ನು ಯಂತ್ರಗಳಿಗೆ ಬಳಸದೆ ಕಡ್ಡಾಯವಾಗಿ ಬಡ ಜನರಿಗೆ ಉದ್ಯೋಗ ಒದಗಿಸುವಲ್ಲಿ ವಿನಿಯೋಗಿಸಬೇಕೆಂದು ತಾಕೀತು ಮಾಡಿದರು.

        ಶಾಸಕ ಮಾಧುಸ್ವಾಮಿ ಮಾತನಾಡಿ ಪಶುಭಾಗ್ಯ ಯೋಜನೆಯಡಿ ಕಳೆದ ಸಾಲಿನಲ್ಲಿ ಆಯ್ಕೆಯಾಗಿರುವ 1206 ಫಲಾನುಭವಿಗಳಿಗೆ ಸಹಾಯಧನ ಈವರೆಗೂ ಪಾವತಿಯಾಗಿಲ್ಲದಿರುವ ಬಗ್ಗೆ ಸ್ಪಷ್ಟೀಕರಣ ಕೇಳಿದಾಗ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ಮಾತನಾಡಿ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಸಹಾಯಧನವನ್ನು ಈಗಾಗಲೇ ಸಂಬಂಧಿಸಿದ ಸೇವಾ ಬ್ಯಾಂಕಿಗೆ ಜಮಾ ಮಾಡಲಾಗಿದೆ. ಬ್ಯಾಂಕಿನವರು ತಡ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

      ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಗತಿ ಕುರಿತು ಡಿಸಿಎಂ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕುಣಿಗಲ್ ತಾಲೂಕಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ 929 ರೈತರಿಗೆ ಈವರೆಗೂ ಹಣ ಪಾವತಿಯಾಗಿಲ್ಲ. ಬೆಳೆ ದರ್ಶಕ್ ಆ್ಯಪ್ ಅನ್ವಯ ಹಣವನ್ನು ತಡೆಹಿಡಿಯಲಾಗಿದ್ದು, ಕೂಡಲೇ ಪಾವತಿಗೆ ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಬೇಕೆಂದು ಕುಣಿಗಲ್ ತಾಲೂಕು ಶಾಸಕ ಡಾ|| ಹೆಚ್.ಡಿ. ರಂಗನಾಥ್ ಒತ್ತಾಯಿಸಿದಾಗ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಡಿಸಿಎಂ ಭರವಸೆ ನೀಡಿದರು.

        ಜಿಲ್ಲೆಯಲ್ಲಿ ಅಂಕಿ-ಅಂಶಗಳ ಪ್ರಕಾರ ಶೇ. 84ರಷ್ಟು ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ. ಇಷ್ಟು ಪ್ರಮಾಣದ ಬಿಪಿಎಲ್ ಕುಟುಂಬಗಳು ಇರಲು ಸಾಧ್ಯವಿಲ್ಲ. ಕೂಡಲೇ ಅನರ್ಹ ಪಡಿತರದಾರರನ್ನು ಗುರುತಿಸಿ ಬಿಪಿಎಲ್ ಪಡಿತರ ಚೀಟಿ ಸೌಲಭ್ಯದಿಂದ ಕೈಬಿಡಬೇಕೆಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಅವರಿಗೆ ಸೂಚನೆ ನೀಡಿದರಲ್ಲದೆ ಪಶುಭಾಗ್ಯ ಯೋಜನೆಯಡಿ ಬಾಕಿ ಇರುವ ರೈತರ ಸಹಾಯಧನವನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿಗಣೇಶ್ ಅವರಿಗೆ ಸೂಚಿಸಿದರು.

       ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 697 ಮಿ.ಮೀ. ಇದ್ದು, ಮೇ ಅಂತ್ಯಕ್ಕೆ 132 ಮಿ.ಮೀ. ವಾಡಿಕೆ ಮಳೆಯಾಗಿದೆ. ವಾಸ್ತವಿಕವಾಗಿ 109 ಮಿ.ಮೀ. ಮಾತ್ರ ಮಳೆಮಾಗಿದ್ದು, 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 416430 ಹೆಕ್ಟೇರ್ ಗುರಿಯನ್ನು ಹೊಂದಲಾಗಿದೆ. ಈ ಪೈಕಿ ಮಳೆ ಕೊರೆತೆಯಾದ ಕಾರಣ 6136 ಹೆ. ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

         ರೈತರಿಗೆ ತೊಂದರೆಯಾಗದಂತೆ ಜಿಲ್ಲೆಯ 50 ರೈತ ಸಂಪರ್ಕ ಕೇಂದ್ರಗಳು ಮತ್ತು 11 ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರೆತೆಯಿಲ್ಲ. ಕೃಷಿ ಭಾಗ್ಯ ಯೋಜನೆಯಡಿ 2019-20ನೇ ಸಾಲಿಗಾಗಿ 1820 ಭೌತಿಕ ಗುರಿಯಿದ್ದು, ಈವರೆಗೆ 361 ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

       ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸಮವಸ್ತ್ರ, ಪಠ್ಯಪುಸ್ತ ವಿತರಣೆ ಶೇ.80 ರಷ್ಟು ವಿತರಣೆ ಮಾಡಲಾಗಿದ್ದು, ಉಳಿದ ಶೇ. 20ರಷ್ಟು ಸಮವಸ್ತ್ರವನ್ನು ಶೀಘ್ರದಲ್ಲಿಯೇ ವಿತರಣೆ ಮಾಡಲಾಗುವುದು ಎಂದು ಸಭೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಮಾಹಿತಿ ನೀಡಿದರು.

        ತಿಪಟೂರು ತಾಲೂಕಿನ ಹಳೇಪಾಳ್ಯ ಶಾಲೆಯಲ್ಲಿ ನೀಡಿಲ್ಲದಿರುವ ಬಗ್ಗೆ ದೂರು ಬಂದಿದ್ದು ಸಂಬಂಧಪಟ್ಟ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದು ಕೂಡಲೇ ಸಮವಸ್ತ್ರ ವಿತರಣೆ ಮಾಡಬೇಕು. ಅಲ್ಲದೇ ಸರ್ಕಾರದಿಂದ ಶಾಲಾ ಕೊಠಡಿಗೆಂದೇ 1300ಕೋಟಿ ರೂ. ಹಣ ಮಂಜೂರು ಮಾಡಲಾಗಿದ್ದು, ದುರಸ್ಥಿಯಲ್ಲಿರುವ ಶಾಲಾ ಕೊಠಡಿ ಸೇರಿದಂತೆ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ ಮಾಡುವಂತೆ ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲೆಯಲ್ಲಿ 3215 ಕ್ಷಯ ರೋಗಿಗಳು ಪತ್ತೆಯಾಗಿದ್ದು, ಅದರಲ್ಲಿ 666 ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಈ ರೋಗದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ ಎಂದರಲ್ಲದೇ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ 589 ಪ್ರಕರಣಗಳನ್ನು ದಾಖಲಿಸಿದ್ದು, ಇದರಿಂದ 69,840 ಹಣ ಸಂಗ್ರಹಿಸಲಾಗಿದೆ. ಅಲ್ಲದೇ 407 ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡಲಾಗಿದೆ ಎಂದು ಸಭೆಗೆ ಡಿಹೆಚ್‍ಓ ಡಾ|| ಚಂದ್ರಿಕಾ ಮಾಹಿತಿ ನೀಡಿದರು.

       ಜಿಲ್ಲೆಯಲ್ಲಿ 17 ವೈದ್ಯರು, 16 ವಿಶೇಷ ತಜ್ಞರು ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

        ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಹೇಮಾವತಿ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಬರುವ ವಾರದೊಳಗೆ ಶಾಸಕರ ಸಭೆ ಕರೆದು ಚರ್ಚಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರ ಬೇಕೆಂದು ಉಪ ಮುಖ್ಯಮಂತ್ರಿಗಳು ಮನವಿ ಮಾಡಿದರು.

        ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ನಿಗಧಿತ ಗುರಿಯನ್ನು ಸಾಧನೆ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

         ಸಭೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜ್ ಹಾಗೂ ಎ. ನಾರಾಯಣಸ್ವಾಮಿ, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಶಾಸಕರಾದ ಬಿ. ಸತ್ಯನಾರಾಯಣ, ಡಿ.ಸಿ. ಗೌರಿಶಂಕರ್, ಎಂ.ವಿ. ವೀರಭದ್ರಯ್ಯ, ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap