ಬಿಸಿಲ ಝಳಕ್ಕೆ ನಲುಗಿದ ಬೆಂಗಳೂರು….!

ಬೆಂಗಳೂರು

   ಸಿಲಿಕಾನ್‌ ಸಿಟಿ ಬೆಂಗಳೂರು ಈ ಬಾರಿ ಬೇಸಿಗೆಗೆ ಹೈರಾಣಾಗಿ ಹೋಗಿದೆ. ಒಂದೆಡೆ ನೀರಿನ ಸಮಸ್ಯೆ, ಮತ್ತೊಂದೆಡೆ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸುಡು ಬಿಸಿಲು, ಸೆಕೆ, ಧಗೆಗೆ ಬೆಂಗಳೂರಿನ ಜನ ಹೈರಾಣಾಗಿ ಹೋಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಜನರು ಕಂಡು ಕೇಳರಿಯದ ಬಿಸಿಲಿನ ತಾಪವನ್ನು ಈ ಬಾರಿ ಎದುರಿಸುವಂತಾಗಿದೆ.

    ಏಪ್ರಿಲ್‌ ತಿಂಗಳ ಕೊನೆಯ ಭಾನುವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಸೋಮವಾರ ಕ್ರಮವಾಗಿ 37.8 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕಂಡುಬರುವ ಕನಿಷ್ಠ ತಾಪಮಾನಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲೇ ಏಪ್ರಿಲ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಹೆಚ್ಚು ಪ್ರಮಾಣದ ಕನಿಷ್ಠ ತಾಪಮಾನವಾಗಿದೆ ಎಂದು ವರದಿಯಾಗಿದೆ.

    ಸಾಮಾನ್ಯವಾಗಿ ರಾಜ್ಯದಲ್ಲಿ ಏಪ್ರಿಲ್‌ ತಿಂಗಳಲ್ಲಿ ಗರಿಷ್ಠ ತಾಪಮಾನ ಕಂಡು ಬರುತ್ತದೆ. ಆದರೆ ಅದೇ ರೀತಿಯ ವಾತಾವರಣ ಮುಂದುವರಿಯುವುದಿಲ್ಲ. ಈ ಹಿಂದೆ 2016 ರ ಏಪ್ರಿಲ್ 25 ರಂದು ಬೆಂಗಳೂರು ನಗರದಲ್ಲಿ 39.2 ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಆದರೆ, ಈ ರೀತಿಯ ತಾಪಮಾನ ಸತತವಾಗಿ ಮುಂದುವರಿದಿರಲಿಲ್ಲ.

   ಇನ್ನು ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚೆಂದರೆ ಒಂದೆರಡು ದಿನ ಇರುತ್ತದೆ. ಆದರೆ ಈ ಬಾರಿ ಆಗಸದಲ್ಲಿ ಮೋಡಗಳು ಮಾಯವಾಗಿದ್ದು, ವರುಣ ಕೃಪೆ ತೋರದ ಕಾರಣ ಗರಿಷ್ಠ ತಾಪಮಾನ ಏರಿಕೆ ಮುಂದುವರಿದಿದೆ. ಬಿಸಿಗಾಳಿ ಕೂಡ ಹೆಚ್ಚಾಗುತ್ತಿದ್ದು, ಜನ ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ನಗರದಲ್ಲಿ 38 ರಿಂದ 39 ಉಷ್ಣಾಂಶ ದಾಖಲಾಗುತ್ತಿದ್ದು, ಒಂದು ವೇಳೆ ಮಳೆ ಬಾರದೇ ಇದ್ದರೆ, ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

   ಇನ್ನು ಬೆಂಗಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವುದರಿಂದ ಉದ್ಯಮ, ವ್ಯಾಪಾರ-ವಹಿವಾಟಿನ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಬಿಸಿಲಿನ ಧಗೆಗೆ ಹೈರಾಣಾಗಿರುವ ಜನರು ಮನೆಯಿಂದ ಹೊರಗೆ ಹೊರಡಲು ಹಿಂದೇಟು ಹಾಕುತ್ತಿದ್ದಾರೆ. ಈಗ ಬಿಸಿಲು ಜಾಸ್ತಿ ಇರುವ ಪರಿಣಾಮ ಟೀ ಕಾಫಿ ಕುಡಿಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಹಾಗೂ ಮಧ್ಯಾಹ್ನದ ಹೊತ್ತು ಹೋಟೆಲ್‌ಗಳಿಗೆ ಹೋಗಿ ಬಿಸಿ ಬಿಸಿ ಊಟ ತಿನ್ನುವವರ ಸಂಖ್ಯೆ ಕಡಿಮೆಯಾಗಿರುವ ಕಾರಣ ಹೋಟೆಲ್​ಗಳ ವಹಿವಾಟಿನಲ್ಲಿ ಶೇ 30 ರಷ್ಟು ಕುಸಿತವಾಗಿರುವ ಬಗ್ಗೆ ಹೋಟೆಲ್ ಅಸೋಸಿಯೇಷನ್ ತಿಳಿಸಿದೆ. ಸದ್ಯ ಮೊದಲಿನಂತೆ ಜನ ಓಡಾಟ ಇಲ್ಲದೇ ಇರುವ ಕಾರಣ ಎಲ್ಲಾ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap