ಬೆಂಗಳೂರು:
ಉದ್ಯಾನ ನಗರಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿತ್ತು. ಭಾನುವಾರ ಸಾಯಂಕಾಲದಿಂದ ತಡರಾತ್ರಿವರೆಗೂ ಸುರಿದ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಧಾರಾಕಾರ ಮಳೆಯಿಂದ ನಗರದ ಹಲವೆಡೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಆಲಿಕಲ್ಲು, ಗುಡುಗು, ಮಿಂಚು ಸಮೇತ ವರ್ಷಧಾರೆ ಸುರಿದಿದ್ದು, ಭಾರೀ ಗಾತ್ರದ ಮರಗಳೂ ಧರೆಗುರುಳಿವೆ. ಸೋಮವಾರ ಬೆಳಗ್ಗೆ ಅವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಬೆಂಗಳೂರು ಮಹಾನಗರ ನಗರಪಾಲಿಕೆ (ಬಿಬಿಎಂಪಿ) ಮುಂದಾಗಿದೆ.
ವಾರಾಂತ್ಯ ಭಾನುವಾರದಂದು ಬೆಂಗಳೂರು ನಿವಾಸಿಗಳು ಭಾರೀ ಮಳೆ ಮತ್ತು ಬೇಸಿಗೆಯ ಸೆಖೆ ಎರಡನ್ನು ಕೂಡಾ ಅನುಭವಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸೆಖೆ ಇದ್ದರೆ, ಸಂಜೆಯಿಂದ ಮಳೆ ಆರ್ಭಟ ಜೋರಾಯಿತು. ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟ ತಾತ್ಕಾಲಿಕ ಸ್ಥಗಿತವಾಯಿತು.
ರಸ್ತೆ ಬದಿ ಮತ್ತು ಕಟ್ಟಡಗಳ ಮೇಲಿನ ನಾಮಫಲಕಗಳು ಧರೆಗೆ ಉರುಳಿದ್ದು, ಗಾಳಿಗೆ ಮನೆ ಮೇಲಿದ್ದ ಹೋಲ್ಡಿಂಗ್ ಬಾಗಿದ್ದರಿಂದ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಬೆಂಗಳೂರು ನಗರದ ವಿವಿಧೆಡೆ 69 ಮರಗಳು 34 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆ.ಜಿ. ರಸ್ತೆಯಲ್ಲಿ ಬಿದ್ದಿದ್ದ ಬೃಹತ್ ಮರದಿಂದ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಮಳೆ ಎಫೆಕ್ಟ್‌ಗೆ ಉತ್ತರಹಳ್ಳಿ ಜನತೆ ಹೈರಾಣಾಗಿದ್ದು, 1 ಗಂಟೆ ಸುರಿದ ಮಳೆ ಪರಿಣಾಮದಿಂದ ಮನೆಗಳಿಗೆ ನೀರು ನುಗ್ಗಿದೆ. ಉತ್ತರಹಳ್ಳಿಯ ಲಕ್ಷ್ಮಯ್ಯ ಲೇಔಟ್‌ನ 100ಕ್ಕೂ ಹೆಚ್ಚು ಮನೆ-ಅಂಗಡಿಗಳಿಗೆ ನೀರು ನುಗ್ಗಿದ್ದು, ಇಡೀ ಪ್ರದೇಶವೇ ಜಲಾವೃತವಾಗಿದೆ. ಕಳೆದ 15 ದಿನ ಹಿಂದೆಯೂ ಜಲಾವೃತವಾಗಿದ್ದ ಸಂಪೂರ್ಣ ಏರಿಯಾ, ರಾಜಕಾಲುವೆ ತುಂಬಿ ಜನವಸತಿ ಪ್ರದೇಶಕ್ಕೆ ಹರಿದಿರುವ ಮಳೆ ನೀರಿನಿಂದ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
