ಅನಂತಪುರಂ:
ಆಂಧ್ರ ಪ್ರದೇಶದಲ್ಲಿ ಭೀಕರ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದ್ದು, ಬೈಕಿಗೆ ಢಿಕ್ಕಿ ಹೊಡೆದ ಕಾರು ಚಾಲಕ ಆತನ ಶವದ ಸಮೇತ 18 ಕಿ.ಮೀ ವರೆಗೂ ಹೋಗಿರುವ ದಾರುಣ ಘಟನೆ ವರದಿಯಾಗಿದೆ.
ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕನೊಬ್ಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಮೃತನ ದೇಹ ವಾಹನದ ಛಾವಣಿಯ ಮೇಲೆ ಬಿದ್ದಿದ್ದರೂ ಅದನ್ನು ಲೆಕ್ಕಿಸದೇ ಬರೊಬ್ಬರಿ 18 ಕಿಲೋಮೀಟರ್ ಕಾರು ಓಡಿಸಿದ್ದಾನೆ. ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಅನಂತಪುರಂ ಜಿಲ್ಲೆಯ ಆತ್ಮಕೂರು ಮಂಡಲದ ಕೊತ್ತಪಲ್ಲಿ ಬಳಿ ಭಾನುವಾರ ರಾತ್ರಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ್ದಾನೆ. ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಎರ್ರಿಸ್ವಾಮಿ ಎಂಬಾತ ಗಂಭೀರವಾಗಿ ಗಾಯಗೊಂಡು ಢಿಕ್ಕಿ ರಭಸಕ್ಕೆ ಗಾಳಿಗೆ ತೂರಿಕೊಂಡು ಕಾರಿನ ಮೇಲೆ ಬಿದ್ದು ಪ್ರಾಣ ಬಿಟ್ಟಿದ್ದಾರೆ.
ಆದರೆ ಈ ವೇಳೆ ಅಪಘಾತವಾದರೂ ಕಾರು ನಿಲ್ಲಿಸದ ಚಾಲಕ ಸುಮಾರು 18 ಕಿಲೋಮೀಟರ್ ಗಳವರೆಗೆ ಕಾರು ಚಲಾಯಿಸಿದ್ದಾನೆ. ಬಳಿಕ ಹನುಮರೆಡ್ಡಿಪಲ್ಲಿಯಲ್ಲಿ ಕಾರು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಪ್ರಸ್ತುತ ಕಾರು ಚಾಲಕನ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಪಘಾತ ಸ್ಥಳದಿಂದ ಸುಮಾರು 18 ಕಿ.ಮೀ ದೂರದಲ್ಲಿ ಬೈಕ್ ಸವಾರ ಶವ ದೊರೆತಿದೆ. ಆರಂಭದಲ್ಲಿ ಆತನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಬೈಕ್ ಸಂಖ್ಯೆ ಇತರೆ ಅಂಶಗಳನ್ನು ಆಧರಿಸಿ ತನಿಖೆ ನಡೆಸಿದಾಗ ಮೃತನ ಗುರುತು ಪತ್ತೆಯಾಗಿದೆ.
ಅಧಿಕಾರಿಗಳು ವಾಹನದ ನೋಂದಣಿ ಸಂಖ್ಯೆ ಸೇರಿದಂತೆ ಸೂಕ್ತ ವಿವರಗಳನ್ನು ಪಡೆದುಕೊಂಡಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ವಾಹನದಲ್ಲಿ ಕಂಡುಬಂದ ಮೊಬೈಲ್ ಫೋನ್ ಅನ್ನು ಸಕ್ರಿಯಗೊಳಿಸಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ಆತ್ಮಕೂರು ಸಬ್ ಇನ್ಸ್‌ಪೆಕ್ಟರ್ ಮುನೀರ್ ಅಹಮದ್ ತಿಳಿಸಿದ್ದಾರೆ.