ಬೆಂಗಳೂರು:
ಅರಣ್ಯ ಇಲಾಖೆಗೆ ಸಂಬಂಧಿಸಿದ ವಿಚಾರಗಳನ್ನು ಕಾನೂನಾತ್ಮಕವಾಗಿ ಕೈಗೆತ್ತಿಕೊಳ್ಳಲು ಮೇ ಮೊದಲನೇ ವಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಡ್ವೋಕೇಟ್ ಜನರಲ್ ಹಾಗೂ ಅಧಿಕಾರಿಗಳೊಂದಿಗೆ ವಿಶೇಷ ಸಭೆಯನ್ನು ಕರೆಯಲಾಗುವುದು ಎಂದು ಮುಖ್ಯಮಂತ್ರಿ. ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶಿವಮೊಗ್ಗದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಶಿವಮೊಗ್ಗ, ಚಿಕ್ಕಮಗಳೂರು,ದಕ್ಷಿಣ ಕನ್ನಡ, ಉತ್ತರ ಕನ್ನಡ , ಉಡುಪಿ, ಕೊಡಗು ಜಿಲ್ಲೆಗಳ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳ ಸಮಸ್ಯೆಗಳಿಗೆ ಕೆಲವು ಸ್ಪಷ್ಟನೆ ನೀಡಬೇಕು. ಕೆಲವು ಕಾನೂನಾತ್ಮಕ ಬದಲಾವಣೆಗಳನ್ನು ತರಬೇಕು. ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಳ್ಳುವುದಿದೆ. ಅವೆಲ್ಲಕೂ ಕ್ರಮ ಜರುಗಿಸಲಾಗುವುದು ಎಂದರು. ಕೆಲವು ವಿಷಯಗಳಿಗೆ ತಕ್ಷಣವೇ ಪರಿಹಾರ ನೀಡಲಾಗುವುದು. ಕೆಲವು ಸರ್ವೋಚ್ಚ ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದಿಂದ ತೀರುವಳಿ ಪಡೆಯಲು ಪ್ರಯತ್ನ ಮಾಡಲಾಗುವುದು ಎಂದರು.
ಶಿವಮೊಗ್ಗದಲ್ಲಿ ಎರಡು ಪ್ರಮುಖ ಯೋಜನೆಗಳಿವೆ. ಈ ಪೈಕಿ ವಿಮಾನ ನಿಲ್ದಾಣ ಕಾಮಗಾರಿ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ವೀಕ್ಷಣೆ ಮಾಡಲಿದ್ದೇನೆ ಎಂದರು. ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿದೆ. ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅದನ್ನು ಪರಿವರ್ತಿಸಲು ಬಹಳ ದಿನಗಳಿಂದ ಈ ಭಾಗದ ಜನ ಇಚ್ಛೆಯಿದೆ. ಅದಕ್ಕೆ ಖಂಡಿತವಾಗಿಯೂ ಸ್ಪಂದಿಸಲಾಗುವದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
