ಮೋದಿ ಭಾವಚಿತ್ರಕ್ಕೆ ಎಳ್ಳು-ನೀರು ಬಿಟ್ಟ ಕಾಂಗ್ರೆಸ್

0
17

ದಾವಣಗೆರೆ:

     ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಎಳ್ಳು-ನೀರು ಬಿಡುವ ಮೂಲಕ ನಗರದಲ್ಲಿ ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದರು.

     ಇಲ್ಲಿನ ಪಾಲಿಕೆ ಆವರಣದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಎಳ್ಳು-ನೀರು ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ, ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಭಾರತೀಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿತ್ತು. ಆದರೆ, ಈ ಭರವಸೆಗಳು ಈಡೇರಿಸದೇ ಮೋದಿ ನೇತೃತ್ವದ ಸರ್ಕಾರ ಜನರಿಗೆ ಎಳ್ಳು-ನೀರು ಬಿಟ್ಟಿದೆ. ಹೀಗಾಗಿ ಕಾಂಗ್ರೆಸ್‍ನಿಂದ ಪಿತೃಪಕ್ಷದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಳ್ಳು-ನೀರು ಬಿಡುವ ಮೂಲಕ ಪ್ರತಿಭಟಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಪ್ರತಿ ಭಾರತೀಯರ ಖಾತೆಗೆ ನರೇಂದ್ರ ಮೋದಿ 15 ಲಕ್ಷ ರೂ. ಜಮೆ ಮಾಡುವುದಾಗಿ ಹೇಳಿದ್ದರು. ಆದರೆ, 15 ಪೈಸೆ ಸಹ ಜಮೆಯಾಗಿಲ್ಲ. ಜನರ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಿದ್ದ ಮೋದಿ ಅವರು ರಫೇಲ್ ಹಗರಣದ ಮೂಲಕ ಬಿಜೆಪಿ ಖಾತೆಗೆ 41 ಸಾವಿರ ಕೋಟಿ ಹಣ ಜಮೆ ಮಾಡಿಕೊಂಡು ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಬಿಜೆಪಿ ಅಭ್ಯರ್ಥಿಗಳಿಗೆ ಕೋಟ್ಯಾಂತ ರೂಪಾಯಿಗಳನ್ನು ಕೊಡುವ ಮೂಲಕ ಗೆಲ್ಲಿಸಿಕೊಂಡು ಬರುತ್ತಿದ್ದಾರೆಂದು ಆರೋಪಿಸಿದರು.

     ಕೇಂದ್ರ ಸರ್ಕಾರ ಆತುರ, ಆತುರವಾಗಿ ನೋಟ್ ಬ್ಯಾನ್ ಮಾಡಿದ್ದರ ಪರಿಣಾಮವಾಗಿ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಬಂದ್ ಆಗಿ, ಕೋಟ್ಯಾಂತರ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಇಂಥಹ ಸಂದರ್ಭದಲ್ಲೂ ಪದೇ, ಪದೇ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ ಬೆಲೆ ಹೆಚ್ಚು ಮಾಡುತ್ತಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವ ಕಾರಣ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದೆ. ಹೀಗಾಗಿ ಈ ಜನ ವಿರೋಧಿ ಸರ್ಕಾರವನ್ನು ಜನತೆ ಕಿತ್ತು ಎಸೆಯಬೇಕೆಂದು ಮನವಿ ಮಾಡಿದರು.

    ತಕ್ಷಣವೇ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು. ಪ್ರೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಕಡಿಮೆ ಮಾಡುವತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು

    ಉಪ ಮೇಯರ್ ಚಮನ್‍ಸಾಬ್ ಮಾತನಾಡಿ, ದೇಶದ ಇತಿಹಾದಲ್ಲಿಯೇ ಅತೀ ಹೆಚ್ಚು ಸುಳ್ಳು ಹೇಳಿದ ಪ್ರಧಾನಮಂತ್ರಿ ಯಾರಾದರೂ ಇದ್ದರೆ, ಅದು ನರೇಂದ್ರ ಮೋದಿ ಮಾತ್ರ. ಗೆದ್ದ ಮೇಲೆ ಇವರು ಒಂದೇ ಒಂದು ಸತ್ಯವನ್ನು ಸಹ ಹೇಳಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾದ ಮೇಲೆ ಜನತೆಯನ್ನು ಒಂದಾದ ಮೇಲೆ ಒಂದರಂತೆ ಸಂಕಷ್ಟಕ್ಕೆ ತಳ್ಳುತ್ತಿದೆ. ಈ ಸಂಕಷ್ಟದಿಂದ ಜನರು ಹೊರಬರಬೇಕಾದರೆ, ಮುಂದಿನ ಚುನಾವಣೆಯಲ್ಲಿ ರಾಹುಲ್‍ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಹೇಳಿದರು.

    ಬಿಜೆಪಿ ಪಕ್ಷಕ್ಕೆ ಯಾವುದೇ ಜನಪರವಾದ ಸಿದ್ಧಾಂತಗಳಿಲ್ಲ. ಧರ್ಮ-ಜಾತಿಗಳ ಮಧ್ಯೆ ದ್ವೇಷ ಬಿತ್ತಿ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಾಲ್ಕು ಆರೋಗ್ಯ ಯೋಜನೆಗಳಿದ್ದವು. ಆದರೆ, ಈ ಸರ್ಕಾರ ಅಧಿಕಾರಕ್ಕೆ ಬಂದಾದ ಮೇಲೆ ಎಲ್ಲಾ ಆರೋಗ್ಯ ಯೋಜನೆಗಳನ್ನು ರದ್ದು ಮಾಡಿದೆ ಎಂದು ಆರೋಪಿಸಿದರು.

   ಪ್ರತಿಭಟನೆಯಲ್ಲಿ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಪಾಲಿಕೆ ಸದಸ್ಯರಾದ ಎಂ.ಹಾಲೇಶ್, ಹಂಚಿನಮನೆ ತಿಪ್ಪಣ್ಣ, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾಂಗ್ರೆಸ್ ಮುಖಂಡರುಗಳಾದ ಸೈಯದ್ ಸೈಫುಲ್ಲಾ, ಎ.ನಾಗರಾಜ್, ಕೆ.ಜಿ.ಶಿವಕುಮಾರ್, ಮೈನುದ್ದೀನ್, ಯುವರಾಜ್, ಶುಭ ಮಂಗಳ, ಹೆಚ್.ಜಯಣ್ಣ, ಭಾಸ್ಕರ್ ಬನಿಯನ್, ವಿಜಯ ಅಕ್ಕಿ, ದ್ರಾಕ್ಷಾಯಣಮ್ಮ, ಸುನೀತಾ ಭೀಮಣ್ಣ, ಇಮ್ತಿಯಾಜ್, ಅಲಿ ರಹಮತ್, ಸದ್ದಾಂ, ಮುಜಾಹಿದ್, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here