ಲಖನೌ:

ಇತ್ತೀಚೆಗೆ ಮಹಿಳೆಯೊಬ್ಬಳು ಮಾಲ್‌ನಲ್ಲಿ ಶಾಪ್ ಮಾಡುತ್ತಿರುವಾಗ ಆಕೆಯ ಪ್ಯಾಂಟ್‌ನ ಹಿಂದಿನ ಜೇಬಿನಲ್ಲಿ ಫೋನ್ ಸ್ಫೋಟಗೊಂಡು ಆಕೆಗೆ ಗಂಭೀರವಾದ ಗಾಯಗಳಾದ ಘಟನೆ ವರದಿಯಾಗಿತ್ತು. ಇದೀಗ ಉತ್ತರ ಪ್ರದೇಶದ ಅಲಿಗಢದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬನ ಜೇಬಿನಲ್ಲಿಟ್ಟಿದ್ದ ಆಪಲ್ ಐಫೋನ್ 13 ಸ್ಫೋಟಗೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಸ್ಫೋಟದ ನಂತರ ಫೋನ್ ತೀವ್ರವಾಗಿ ಸುಟ್ಟುಹೋಗಿರುವುದು ರೆಕಾರ್ಡ್ ಆಗಿದೆ. ಈ ವಿಡಿಯೊ ಈಗ ವೈರಲ್(Viral Video) ಆಗಿದೆ. ಈ ಫೋನ್ ಅವನ ಪ್ಯಾಂಟ್ ಜೇಬಿನಲ್ಲಿದ್ದಾಗ ಸ್ಫೋಟಗೊಂಡಿದ್ದ ಕಾರಣ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಅಲಿಗಢ ಜಿಲ್ಲೆಯ ಚಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶಿವಪುರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಯುವಕನ ಐಫೋನ್ 13 ತನ್ನ ಜೇಬಿನಲ್ಲಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ಸ್ಫೋಟದಿಂದ ಅವನ ದೇಹವು ತೀವ್ರವಾಗಿ ಸುಟ್ಟುಹೋಗಿದೆ. ತೀವ್ರ ನೋವಿನಿಂದ ಬಳಲುತ್ತಿದ್ದ ಆತನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಈ ವ್ಯಕ್ತಿ ಕೆಲವು ದಿನಗಳ ಹಿಂದೆ ಐಫೋನ್ 13 ಅನ್ನು ಖರೀದಿಸಿದ್ದಾನೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಜೇಬಿನಲ್ಲಿದ್ದ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತಂತೆ. ಸ್ಫೋಟದ ನಂತರ, ಆ ವ್ಯಕ್ತಿ ನೋವಿನಿಂದ ಕಿರುಚಿಕೊಳ್ಳುತ್ತಾ ಉರಿಯುತ್ತಿದ್ದ ಫೋನ್ ಅನ್ನು ತನ್ನ ಜೇಬಿನಿಂದ ಹೊರತೆಗೆದಿದ್ದಾನೆ.
ಈ ಘಟನೆಯು ಹೆಚ್ಚಿನ ಜನರನ್ನು ಆತಂಕಕ್ಕೀಡು ಮಾಡಿದೆ. ಯಾಕೆಂದರೆ ಇದು ಯಾವುದೋ ಕಡಿಮೆ ಗುಣಮಟ್ಟದ ಸ್ಮಾರ್ಟ್‍ಫೋನ್ ಅಲ್ಲ. ತಾಂತ್ರಿಕ ದೋಷಗಳಿಂದಾಗಿ ಎಂತಹ ಫೋನ್ ಆದರೂ ಅಪಾಯಕಾರಿಯಾಗಬಹುದೇ? ಎಂಬ ಬಗ್ಗೆ ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಗಢ ಪೊಲೀಸರು ತನಿಖೆಯನ್ನು ಶುರುಮಾಡಿದ್ದಾರೆ. ಮತ್ತು ಹೈ ಎಂಡ್ ಮೊಬೈಲ್ ಫೋನ್ ಸ್ಫೋಟದ ಹಿಂದಿನ ಕಾರಣವನ್ನು ಕಂಡುಹಿಡಿಯಲು ತಜ್ಞರ ಸಹಾಯವನ್ನು ಕೋರಿದ್ದಾರೆ.
ಐಫೋನ್ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ, ಉತ್ತರ ಪ್ರದೇಶದ ಅಲಿಗಢದಲ್ಲಿ ಉದ್ಯಮಿಯೊಬ್ಬರು ಐಫೋನ್ ಸ್ಫೋಟಕ್ಕೆ ಬಲಿಯಾಗಿದ್ದಾರೆ. 47 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಪ್ರೇಮ್ ರಾಜ್ ಸಿಂಗ್ ಅವರು ತಮ್ಮ ಜೇಬಿನಲ್ಲಿ ಐಫೋನ್ ಅನ್ನು ಇಟ್ಟುಕೊಂಡಿದ್ದಾಗ ಅದು ಸ್ಫೋಟಗೊಂಡಿತ್ತು. ಸ್ಫೋಟದಿಂದಾಗಿ ಸಿಂಗ್ ಎಡ ತೊಡೆ ಮತ್ತು ಹೆಬ್ಬೆರಳಿಗೆ ಸಣ್ಣ ಸುಟ್ಟ ಗಾಯಗಳಾಗಿತ್ತು. ತಕ್ಷಣ ಅವನು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಯಲ್ಲಿ ಸ್ಫೋಟಗೊಂಡ ಐಫೋನ್‍ನ ನಿಖರವಾದ ಮಾದರಿಯನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ದೃಶ್ಯ ಪುರಾವೆಗಳು ಬಹುಶಃ ಐಫೋನ್ 7 ಎಂದು ಅಂದಾಜಿಸಿದೆ.
