ರಫೇಲ್ ಹಗರಣ ತನಿಖೆಗೆ ಎಡ ಪಕ್ಷಗಳ ಆಗ್ರಹ

 ದಾವಣಗೆರೆ:

      ರಫೇಲ್ ಯುದ್ಧ ವಿಮಾನ ಖರೀದಿ ಹಗರಣವನ್ನು ಸಮರ್ಪಕ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ, ನಗರದಲ್ಲಿ ಬುಧವಾರ ಎಡ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

      ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಸಿಪಿಐ, ಸಿಪಿಐ(ಎಂ ಹಾಗೂ ಎಸ್‍ಯುಸಿಐ ಪಕ್ಷಗಳ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಹೊರಟು, ಗಾಂಧಿ ವೃತ್ತ ತಲುಪಿ ಬಹಿರಂಗ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಎಡ ಪಕ್ಷಗಳ ಮುಖಂಡರು, 2016ರ ನವೆಂಬರ್ 18ರಂದು 36 ರಫೆಲ್ ಯುದ್ದ ವಿಮಾನಗಳ ದರವನ್ನು ಪ್ರತಿ ವಿಮಾನಕ್ಕೆ 670 ಕೋಟಿ ರೂ. ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವಾಲಯ ಲೋಕಸಭೆಯಲ್ಲಿ ಬಹಿರಂಗಗೊಳಿಸಿತ್ತು. ಆದರೆ, ಒಪ್ಪಂದ ಮಾಡಿಕೊಂಡಿರುವ ಫ್ರಾನ್ಸ್‍ನ ಡಸಾಲ್ಟ್ ಮತ್ತು ರಿಲಯನ್ಸ್ ಕಂಪನಿಗಳು ಪ್ರತಿ ವಿಮಾನದ ದರವನ್ನು 1660 ಕೋಟಿ ರೂ. ನಿಗದಿ ಮಾಡಲಾಗಿದೆ ಎಂಬುದಾಗಿ ಹೇಳಿಕೆ ನೀಡಿದ್ದವು. ಇವುಗಳ ಅಂಕಿ ಅಂಶದ ಪ್ರಕಾರವೇ ಒಂದು ವಿಮಾನಕ್ಕೆ 990 ಕೋಟಿ ರೂ. ದರವನ್ನು ಏಕಾಏಕಿ ಹೆಚ್ಚಿಸಿರುವುದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಹಲವು ಶಂಕೆಯನ್ನು ಮೂಡಿಸುತ್ತಿದೆ ಎಂದು ಆರೋಪಿಸಿದರು.

      ಸರ್ಕಾರಿ ಸ್ವಾಮ್ಯದ ಹೆಚ್‍ಎಎಲ್‍ಗಿಂತ ಅನಿಲ್ ಅಂಬಾನಿಯ ಸಂಸ್ಥೆ ರಾಷ್ರೀಯ ಭದ್ರತೆಯ ಹಿತ ಕಾಯುತ್ತದೆ ಎಂಬ ಬಗ್ಗೆ ನಂಬಿಕೆ ಇಲ್ಲವಾಗಿದೆ. ಹೆಚ್‍ಎಎಲ್ ಸಾಮಥ್ರ್ಯ ಹೊಂದಿಲ್ಲ ಎಂದು ರಕ್ಷಣಾ ಸಚಿವರು ಹೇಳಿರುವ ದಾಖಲೆ ಇದ್ದು, ಅದಕ್ಕೆ ಪ್ರತಿಯಾಗಿ ಹೆಚ್‍ಎಎಲ್ ನ ಮಾಜಿ ಅಧ್ಯಕ್ಷರು ಉತ್ತರ ನೀಡಿದ್ದಾರೆ. ಇನ್ನು ವ್ಯವಹಾರ ಘೋಷಿಸಿದ ನಂತರವಷ್ಟೇ ರಿಲಯನ್ಸ್ ಏವಿಯೇಷನ್ ಸಂಸ್ಥೆಗೆ ನಾಗಪುರದಲ್ಲಿ ಜಮೀನು ಮಂಜೂರಾಗಿರುವುದು. ವ್ಯವಹಾರ ಒಪ್ಪಂದ ಘೋಷಣೆಯಾಗುವ ಸಂದರ್ಭದಲ್ಲಿ ಕೇವಲ ಕಾಗದದ ಮೇಲಿರುವ ಒಂದು ಕಂಪನಿಯಿಂದ ಹೆಚ್ಚು ಸಮರ್ಥವಾಗಿ ರಾಷ್ಟ್ರೀಯ ಭದ್ರತೆಯ ಹಿತ ಕಾಯಬಹುದೆಂಬುದನ್ನು ನಂಬಲು ಸಾಧ್ಯವೇ ಇಲ್ಲ ಎಂದರು.

      ನ ಖಾವೂಂಗಾ-ನ ಖಾನೇದೂಂಗಾ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಭದ್ರತೆಯನ್ನು ಅಡವಿಟ್ಟು ತಮ್ಮ ಮಿತ್ರ ಅಂಬಾನಿಗೆ ದೇಶವನ್ನು ಸುಲಿಗೆ ಮಾಡಲು ಸುಗಮ ಹಾದಿ ಮಾಡಿ ಕೊಟ್ಟಿದ್ದಾರೆ. ಕೂಡಲೇ ದೇಶದ ಬೊಕ್ಕಸ ಲೂಟಿ ಮಾಡುವ ರಫೆಲ್ ಯುದ್ದ ವಿಮಾನ ಖರೀದಿ ಉತ್ಪಾದನೆಯಲ್ಲಿ ಉಂಟಾಗಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರಗಳ ಸಮರ್ಪಕ ತನಿಖೆ ನಡೆಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಮುಖಂಡರಾದ ಹೆಚ್.ಜಿ.ಉಮೇಶ್, ಆವರಗೆರೆ ಚಂದ್ರು, ಆನಂದರಾಜ್, ಕೆಎಲ್ ಭಟ್, ಆವರಗೆರೆ ವಾಸು, ಕುಕ್ಕವಾಡ ಮಂಜುನಾಥ್. ಎಂ ಬಿ ಶಾರದಮ್ಮ, ಸರೋಜ, ಐರಣಿ ಚಂದ್ರು, ನೇತ್ರಾವತಿ, ಹೆಚ್.ಪಿ.ಉಮಾಪತಿ, ಎ.ತಿಪ್ಪೇಶಿ ಆವರಗೆರೆ, ಪರಮೇಶ್ವರ, ಎನ್.ಟಿ.ಬಸವರಾಜ್, ಸೈಯದ್ ಖಾಜಾಪೀರ್, ಜ್ಯೋತಿ ಕುಕ್ಕವಾಡ, ಶ್ರೀನಿವಾಸ್, ಸಿ.ರಮೇಶ್, ವಿ.ಲಕ್ಷ್ಮಣ್, ಟಿ.ಎಸ್.ನಾಗರಜ್, ರಂಗನಾಥ್, ಮಧು, ಪೂಜಾ, ಸೌಮ್ಯ, ತಿಪ್ಪೆಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link