ರಾಜಕೀಯವಾಗಿ ನನ್ನ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ : ಡಿ ಕೆ ಶಿ

ಬೆಂಗಳೂರು

      ಹದಿನೈದು ವರ್ಷಗಳಿಂದ ಖರೀದಿದ್ದು ಒಂದೇ ಒಂದು ಮನೆ. ಬೇರೆ ಇನ್ಯಾವುದೇ ಆಸ್ತಿ ಖರೀದಿಸಿಲ್ಲ. ಆದರೂ ನನ್ನ ಆಸ್ತಿ ಪ್ರಮಾಣ ಹೆಚ್ಚಾಗಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರದೊಂದಿಗೆ ನಾನು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಐದು ಸಾವಿರ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದರೆ ತಮ್ಮ ಮೇಲೆ ಎಷ್ಟು ಮಂದಿ ಕಣ್ಣಿಟ್ಟಿರಬಹುದು?. ಬಿಜೆಪಿಯ ಐಟಿ ಸೆಲ್ ಸೇರಿದಂತೆ ಅನೇಕ ಘಟಕಗಳು ನನ್ನ ಪ್ರಮಾಣ ಪತ್ರವನ್ನು ಪಡೆದುಕೊಂಡಿವೆ. ಕಳೆದ ಚುನಾವಣೆಯಲ್ಲೇ ನನ್ನ ನಾಮಪತ್ರ ತಿರಸ್ಕರಿಸುವ ಯತ್ನ ನಡೆದಿತ್ತು ಎಂದು ಆರೋಪಿಸಿದರು.

    ನನ್ನ ಆಸ್ತಿ ಮೌಲ್ಯ ಹೇಗೆ ಜಾಸ್ತಿಯಾಯಿತು ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಕಳೆದ ಬಾರಿ ನಾನೇ ಖುದ್ದು ಆದಾಯ ತೆರಿಗೆ ಇಲಾಖೆಗೆ ತೆರಳಿ ವಿವರಣೆ ನೀಡಬೇಕಾಯಿತು. ಹಿಂದೆ ಹೊಂದಿದ್ದ ಆಸ್ತಿಯ ಮೌಲ್ಯ ಏರಿಕೆಯಾಗುತ್ತಿದೆ. ಅದನ್ನೇ ವ್ಯತಿರಿಕ್ತವಾಗಿ ಬಿಂಬಿಸಿ ತಿರುಚುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

    ಆಡಳಿತದಲ್ಲೂ ನನಗೂ ಅಧಿಕಾರಿ ಸ್ನೇಹಿತರಿದ್ದಾರೆ. ಕಾಲಕಾಲಕ್ಕೆ ಮಾಹಿತಿ ನೀಡುತ್ತಾರೆ, ಚುನಾವಣೆ ವೇಳೆ ನನ್ನ ವಿರುದ್ಧ ಭಾರೀ ಸಂಚು ನಡೆದಿದೆ. ನನ್ನನ್ನು ಜೆಚ್ಚಿ ಚುಚ್ಚಿ ಕಿರುಕುಳ ನೀಡುತ್ತಿದ್ದಾರೆ.

    ನಾನು ಅಧ್ಯಕ್ಷನಾದ ಮೇಲೆ ನಡೆದ ಮೇಕೆದಾಟು, ಸ್ವತಂತ್ರ ನಡಿಗೆ, ಭಾರತ್ ಜೋಡೋ ಯಾತ್ರೆಗಳ ಯಶಸ್ಸು ಬಿಜೆಪಿಯವರ ಕಣ್ಣು ಕುಕ್ಕುತ್ತಿವೆ. ಕೋವಿಡ್ ವೇಳೆ ಬಿಜೆಪಿಯವರು ಭ್ರಷ್ಟಾಚಾರ ಮಾಡಿದರು, ನಾವು ಜನರ ಸೇವೆ ಮಾಡಿದೆವು. ಭ್ರಷ್ಟಾಚಾರಕ್ಕೆ ಸಂಬಂಸಿದಂತೆ ಸಚಿವರ ರಾಜೀನಾಮೆ ಪಡೆಯಲಿಲ್ಲ. ಡಿ.ಕೆ.ಶಿವಕುಮಾರ್ ರಾಜಕೀಯದಲ್ಲಿದ್ದರೆ ತಾನೇ ಇದೆಲ್ಲಾ ನಡೆಯಲು ಸಾಧ್ಯ ಎಂಬ ಕಾರಣಕ್ಕೆ ನನ್ನನ್ನು ರಾಜಕೀಯದಿಂದಲೇ ಇಲ್ಲವಾಗಿಸಲು ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

    ಆದಾಯ ಮೀರಿದ ಆಸ್ತಿ ಪ್ರಕರಣಕ್ಕೆ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಸರ್ಕಾರ ಒತ್ತಡಕ್ಕೆ ಮಣಿದು ನನ್ನ ವಿರುದ್ಧ ತನಿಖೆಗೆ ಸಿಬಿಐಗೆ ಒಪ್ಪಿಸಿದೆ. ಸಿಬಿಐ ತನಿಖೆ ಬೇಕಿಲ್ಲ, ರಾಜ್ಯದಲ್ಲಿರುವ ಎಸಿಬಿ ತನಿಖೆಯೇ ಸಾಕು ಎಂದು ಅಡ್ವೊಕೇಟ್ ಜನರಲ್ ವರದಿ ನೀಡಿದ್ದರು, ಅದನ್ನೂ ಮೀರಿ ಒತ್ತಡಕ್ಕಾಗಿ ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ. ಬೇರೆ ಯಾರ ವಿರುದ್ಧವೂ ಈ ರೀತಿ ನಿರ್ಧಾರ ತೆಗೆದುಕೊಂಡಿರಲಿಲ್ಲ. ಸರ್ಕಾರದ ನಿರ್ಧಾರವನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೆ, ನಿನ್ನೆ ಅದರ ತೀರ್ಪು ಬಂದಿದೆ ಎಂದರು.

     ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ರಾಹುಲ್‌ಗಾಂಯಷ್ಟೇ ಅಲ್ಲ, ಸಾವಿರಾರು ಜನ ನಾಯಕರು ಅನೇಕ ಭಾಷಣಗಳನ್ನು ಮಾಡುತ್ತಾರೆ. ಆದರೆ ರಾಹುಲ್‌ಗಾಂಧಿಯವರನ್ನು ಮಾತ್ರ ಗುರಿ ಮಾಡಲಾಗಿದೆ, ಅವರಾಡಿದ ಮಾತಿಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಕೊಡುತ್ತದೆ, ಮಾರನೇ ದಿನವೇ ಸಂಸತ್ ಸ್ಥಾನದಿಂದ ಅನರ್ಹಗೊಳಿಸಲಾಗುತ್ತದೆ. ಮನೆ ಖಾಲಿ ಮಾಡಿಸುತ್ತಾರೆ.

     ರಾಹುಲ್‌ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ನಿಸ್ವಾರ್ಥಿ, ಭಾರತ್ ಜೋಡೋ ಯಾತ್ರೆಯಲ್ಲಿ ಯಾರ ಮನೆಗೂ ಬರದೇ ಬೀದಿಯಲ್ಲಿ ವ್ಯಾನ್ ನಿಲ್ಲಿಸಿಕೊಂಡು ಮಲಗಿದ್ದ ನಾಯಕ, ಅಂತಹವರನ್ನೇ ಬಿಡಲಿಲ್ಲ. ಸೋನಿಯಾ ಗಾಂ ಒಂದು ರೂಪಾಯಿಯನ್ನೂ ಪಡೆಯಲಿಲ್ಲ. ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಪಕ್ಷಕ್ಕೆ ಐದು, ಹತ್ತು ಲಕ್ಷ ನೀಡಿದವರನ್ನು ಬಿಡದೆ ವಿಚಾರಣೆ ಮಾಡಿ ಕಿರುಕುಳ ನೀಡಿದರು. ಪ್ರತಿ ಹಂತದಲ್ಲೂ ಬಿಜೆಪಿ ಅಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಷಡ್ಯಂತ್ರ ರೂಪಿಸಿದೆ. ಹೀಗಾಗಿ ತಾವು ಮುನ್ನೆಚ್ಚರಿಕೆ ತೆಗೆದುಕೊಂಡು ನನ್ನ ಸಹೋದರ ಡಿ.ಕೆ.ಸುರೇಶ್‌ರಿಂದ ನಾಮಪತ್ರ ಹಾಕಿಸಿದ್ದೇನೆ ಎಂದು ಹೇಳಿದರು.

     ಬಿಜೆಪಿಯವರು ಏನಾದರೂ ಮಾಡಲಿ,ಜನ ನನ್ನನ್ನು ಕಲ್ಲು ಬಂಡೆ ಎಂದು ಕರೆದಿದ್ದೀರಾ, ಕಲ್ಲನ್ನು ಕಡಿದರೆ ವಿಕೃತಿ. ನನಗೆ ಬಿಜೆಪಿಯವರ ಅನುಕಂಪವೂ ಬೇಡ. ಜನರ ಪ್ರೀತಿ ಸಾಕು. ಸೋಮಣ್ಣ ಕೆಲ ಹಿತವಚನ ಹೇಳಿದ್ದಾರೆ, ನಮಗೆ ಸೋಮಣ್ಣ ಅಥವಾ ಮೋದಿ ಅವರ ಹಿತವಚನ ಬೇಡ, ಬಸವಣ್ಣನವರ ಮಾರ್ಗದರ್ಶನ ಇದೆ. ಬಿಜೆಪಿಯಲ್ಲಿ ಲಿಂಗಾಯತರಿಗೆ ಏನಾಗುತ್ತಿದೆ ಎಂದು ನೋಡಿಕೊಳ್ಳಲಿ, ಮೊದಲು ಚುನಾವಣೆಗೆ ಬಸವರಾಜ ಬೊಮ್ಮಾಯಿ ನಾಯಕತ್ವ ಎಂದಿದ್ದರು, ಈಗ ಮೋದಿ ಮುಖ ತೋರಿಸಿ ಮತ ಕೇಳುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ಕಿಡಿಕಾರಿದರು.

     ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಹಿಂದೆ ನಮ್ಮದೇ ಆದ ಕಾರ್ಯತಂತ್ರ ಇದೆ. ನಾಮಪತ್ರ ಪರಿಶೀಲನೆಯಲ್ಲಿ ಒಂದೇ ದಿನಕ್ಕೆ ನಮ್ಮನ್ನು ಮನೆಯಿಂದ ಹೊರ ಹಾಕಬಹುದು. ಇಂಗ್ಲಿಷ್‌ನ ನೋಗೂ ನಾಟ್‌ಗೂ ವ್ಯತ್ಯಾಸ ಇದೆ. ಅಗ್ರಿ ಪಕ್ಕದಲ್ಲಿ ಡಿಸ್‌ಅಗ್ರಿ,ಅಡ್ಮಿಟ್‌ಬದಲು ಡಿಸ್‌ಮಿಸ್ ಎಂದು ಬರೆದರೆ ಸಾಕು. ನಾಮಪತ್ರ ತಿರಸ್ಕಾರವಾಗುತ್ತದೆ. ಅದನ್ನು ಸರಿ ಪಡಿಸಲು ನಾವು ನ್ಯಾಯಾಲಯದಲ್ಲಿ ಸರಣಿ ಹೋರಾಟ ನಡೆಸಬೇಕಾಗುತ್ತದೆ. ಇವರು ಅಕಾರಿಗಳನ್ನು ಬಳಸಿಕೊಂಡು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.

     ನನ್ನ ಪ್ರಮಾಣ ಪತ್ರಗಳು ಶುದ್ಧವಾಗಿವೆ, ಪಾರದರ್ಶಕವಾಗಿವೆ. ಅವನ್ನು ತಿಸ್ಕಾರ ಮಾಡಲು ಅಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಡಿ, ಆದಾಯ ತೆರಿಗೆ, ಸಿಬಿಐ ಬಳಸಿಕೊಂಡು ಕಿರುಕುಳ ನೀಡುತ್ತಿದ್ದವರು, ಈಗ ಬೇರೆ ಮಾದರಿ ಅನುಸರಿಸುತ್ತಿದ್ದಾರೆ. ಆದಾಯ ತೆರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link