ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ

ದಾವಣಗೆರೆ :

  ನಗರದ ಆಂಜನೇಯ ಬಡಾವಣೆಯಲ್ಲಿರುವ ಕುಸ್ತಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಕುಸ್ತಿ ಪಟು ದಿ|| ವಿಕಾಸಗೌಡ ಅವರ ಸ್ಮರಣಾರ್ಥ ಜಿಲ್ಲಾ ಕುಸ್ತಿ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿಗೆ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಬಿ.ವೀರಣ್ಣ ಚಾಲನೆ ನೀಡಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ವೈದ್ಯ ಡಾ.ಆರ್.ಆರ್.ಪಾಟೀಲ್, ಇತ್ತಿಚಿನ ದಿನಗಳಲ್ಲಿ ಯುವಕರು ಗುಟ್ಕಾ, ತಂಬಾಕು, ಸಿಗರೇಟ್, ಮದ್ಯ ಸೇವಿಸುವ ಮೂಲಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶೋಕಿಗಾಗಿ ಆರೋಗ್ಯ ಹಾಳು ಮಾಡಿಕೊಳ್ಳುವ ಜೊತೆಗೆ ಕುಟುಂಬದವರನ್ನೂ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಯುವಜನರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತರಾಗಬೇಕು. ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

  ದೇಹದ ತೂಕದ ಆಧಾರದ ಮೇಲೆ ಕಿರಿಯರ ವಿಭಾಗದಲ್ಲಿ 30, 35, 40, 45, 50 ಕೆಜಿ ಹಾಗೂ ಹಿರಿಯರ ವಿಭಾಗದಲ್ಲಿ 57, 61, 65, 74, 86, 96 ಹಾಗೂ 96 ಕೆಜಿಗೂ ಅಧಿಕ ತೂಕ ಇರುವವರು ಕುಸ್ತಿ ಪಂದ್ಯಾವಳಿಯಲ್ಲಿ ಬೆಳಗಾವಿ, ಗದಗ, ಧಾರವಾಡ, ಗದಗ, ಉತ್ತರಕನ್ನಡ, ಬಿಜಾಪುರ, ಹುಳಿಯಾಳ, ಬಳ್ಳಾರಿ, ಮಂಡ್ಯ, ಉಡುಪಿ, ಬಾಗಲಕೋಟೆ, ಮಂಗಳೂರು ಸೇರಿದಂತೆ ಇತರೆ ಜಿಲ್ಲೆಗಳ ಒಟ್ಟು 160 ಕುಸ್ತಿಪಟುಗಳು ಭಾಗವಹಿಸಿದ್ದರು.

  ವಿಜೇತರಿಗೆ ಮೊದಲನೇ ಬಹುಮಾನವಾಗಿ 5000, ಎರಡನೇ ಬಹುಮಾನವಾಗಿ 3,000, ತೃತೀಯ ಬಹುಮಾನವಾಗಿ 2,000 ನಗದು ಟ್ರೋಫಿ ನೀಡಲಾಯಿತು.

  ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ.ವೀರೇಶ್, ಎವಿಕೆ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಮಲ್ಲಿಕಾರ್ಜುನಪ್ಪ, ಹಿರಿಯ ತರಬೇತಿದಾರ ಶ್ರೀನಿವಾಸಗೌಡ, ಶಂಕರಪ್ಪ, ಪಾಲಿಕೆ ಸದಸ್ಯ ಬಿ.ಪರಸಪ್ಪ, ಶ್ರೀನಿವಾಸಗೌಡ, ಹೆಚ್.ಬಸವರಾಜ್, ಕೋಟೆ ಮಂಜುನಾಥ್, ಕ್ರೀಡಾ ನಿಲಯದ ಕುಸ್ತಿ ತರಬೇತುದಾರ ಶಿವಾನಂದ್, ದಿ.ವಿಕಾಸಗೌಡ ತಂದೆ ಕೃಷ್ಣಪ್ಪ, ತಾಯಿ ವೀಣಾ ಕಾರ್ಯಕ್ರಮದಲ್ಲಿ ಹಾಜರಿದ್ದರು.