ರುದ್ರನ ಗುಡಿಯಲ್ಲಿ ಗೌರಮ್ಮನ ಪ್ರತಿಷ್ಠಾಪನೆ

ಚಿಕನಾಯಕನಹಳ್ಳಿ
               ಮನೆಯ ಹೆಣ್ಣು ಮಕ್ಕಳಿಗೆ ಗೌರಿ ಬಾಗಿನ ನೀಡುವ ಆಚರಣೆ ಚೌತಿಯ ಮುನ್ನಾದಿನ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲ್ಪಡುತ್ತದೆ.
                 ಪಟ್ಟಣದ ರುದ್ರನಗುಡಿಯಲ್ಲಿ ದೇಶದ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಸಾಮಾನ್ಯವಾಗಿ ದೊಡ್ಡಗಾತ್ರದ ಗಣೇಶನ ಪಕ್ಕದಲ್ಲಿ ಪುಟ್ಟ ಗೌರಮ್ಮನನ್ನು ಪ್ರತಿಷ್ಠಾಪಿಸುವುದು ವಾಡಿಕೆ. ಆದರೆ ಇಲ್ಲಿ ಗೌರಮ್ಮನೇ ಗಾತ್ರದಲ್ಲಿ ದೊಡ್ಡವರು. ಪಕ್ಕದಲ್ಲಿ ಪುಟ್ಟಗಣಪ ದೃಷ್ಟಿ ಬೊಂಬೆಯಂತೆ ಕುಳಿತಿರಬೇಕು.
                 ದೇಶದ ಗೌರಮ್ಮನ ಆರಾಧನೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗಣೇಶ ಚತುರ್ಥಿಯ ಮುನ್ನಾ ದಿನವಾದ ಬುಧವಾರ ಪ್ರತಿ ವರ್ಷದಂತೆ ರುದ್ರನ ಗುಡಿಯಲ್ಲಿ ದೇಶದ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಬೆಳಗ್ಗೆ ಗಂಗಾಪೂಜೆಯೊಂದಿಗೆ ವಿಧಿ ವಿಧಾನಗಳು ಪ್ರಾರಂಭವಾದವು. ಸುತ್ತಮುತ್ತಲ ಮನೆಗಳಲ್ಲಿ ಪ್ರತಿಷ್ಠಾಪಿಸಲು ತಂದಿದ್ದ ಪುಟ್ಟ ಗಣಪನ ಮೂರ್ತಿಗಳನ್ನು ದೊಡ್ಡ ದೇಶದ ಗೌರಮ್ಮನ ಪಕ್ಕದಲ್ಲಿ ಕುಳ್ಳಿರಿಸಲಾಯಿತು.
                  ಶ್ರಾವಣ ಮಾಸದ ಯಾವುದೇ ದಿನದಂದು ತವರು ಮನೆಯಿಂದ ಬಾಗಿನ ತಂದರೂ ಗೌರಿ ಬಾಗಿನದ ದಿನದಂದೆ ಮುತೈದೆಯರು ಬಾಗಿಣ ಬಿಚ್ಚುತ್ತಾರೆ. ಮುತೈದೆಯರೆಲ್ಲ ಶುಭ್ರಗೊಂಡು ತವರಿನಿಂದ ಬಂದು ಬಾಗಿಣವನ್ನು ರುದ್ರನ ಗುಡಿಗೆ ತರುತ್ತಾರೆ. ಸೀರೆ, ಕುಪ್ಪಸ, ಬಳೆ, ಅರಿಶಿಣ, ಕುಂಕುಮ ಮತ್ತು ಐದು ಬಗೆ ಧಾನ್ಯಗಳನ್ನು ದೇಶದ ಗೌರಮ್ಮನಿಗೆ ಅರ್ಪಿಸುತ್ತಾರೆ. ನಂತರ ಮುತೈದೆಯರು ಒಬ್ಬರಿಗೊಬ್ಬರು ಮಡಿಲು ತುಂಬಿ ಪರಸ್ಪರ ಶುಭ ಕೋರುತ್ತಾರೆ.