ಕುಣಿಗಲ್
ರೈತರು ಬೆಳೆದ ಬೆಳೆಗಳನ್ನು ಒಟ್ಟಾಗಿ ಸಂಗ್ರಹಿಸಿ ರೈತ ಉತ್ಪಾದಕ ಕಂಪನಿಗಳ ಮೂಲಕ ಮಾರಾಟ ಮಾಡಿದಾಗ ಹೆಚ್ಚಿನ ಬೆಲೆಗೆ ಮಾರಲು ಸಾಧ್ಯ ಎಂದು ನಬಾರ್ಡ್ ಮುಖ್ಯ ಮಹಾಪ್ರಬಂಧಕÀ ಪಿ.ವಿ.ಎಸ್. ಸೂರ್ಯಕುಮಾರ್ ತಿಳಿಸಿದರು.
ಅವರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ಹುಲಿಯೂರುದುರ್ಗ ಮತ್ತು ಹುತ್ರಿದುರ್ಗ ರೈತ ಉತ್ಪಾದಕರ ಕಂಪನಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ರೈತರಿಗೆ ಬೇಕಾದ ಪರಿಕರಗಳನ್ನು ಸಗಟು ಬೆಲೆಗೆ ಖರೀಧಿಸಿ ಮಾರಾಟ ಮಾಡಿದಾಗ ಕಡಿಮೆ ಬೆಲೆಗೆ ಸಿಗುತ್ತವೆ ಹಾಗೂ ಉತ್ತಮ ಗುಣಮಟ್ಟದ ಪರಿಕರಗಳು ಸಿಗುತ್ತವೆ. ಕಂಪನಿಗಳಲ್ಲಿ ನೀವು ಮಾಲೀಕರು ಹಾಗೂ ಗ್ರಾಹಕರು ಆಗಿರುತ್ತೀರಿ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಡಾ. ಪಳನಿಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಈ ಉತ್ಪಾದಕರ ಕಂಪನಿಗಳು ರಾಜ್ಯದಲ್ಲಿ ನಂ.1 ಕಂಪನಿಗಳಾಗಿ ಹೊರಹೊಮ್ಮಲಿ ಎಂದು ಹಾರೈಸಿದರು. ಕುಣಿಗಲ್ ಎಸ್‍ಬಿಐ ನ ಕ್ಷೇತ್ರಾಧಿಕಾರಿಗಳಾದ ಹರಿದಾಸ್ ಕಂಪನಿಗಳಿಗೆ ಬ್ಯಾಂಕಿನ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಐಡಿಎಫ್ ಸಂಸ್ಥೆ ಕಾರ್ಯನಿರ್ವಾಹಕ ಟ್ರಸ್ಟಿ ಶ್ರೀಕಾಂತ್ ಶಣೈ, ಸುಜೀವನ ಒಕ್ಕೂಟದ ಅಧ್ಯಕ್ಷರಾದ ಎಲ್.ವಿ. ಸತ್ಯಮಾಧವ ಮಾತನಾಡಿದರು. ಹುಲಿಯೂರುದುರ್ಗ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಶಿವಪ್ಪ ಸ್ವಾಗತಿಸಿ, ಹುತ್ರಿದುರ್ಗ ರೈತ ಉತ್ಪಾದಕರ ಕಂಪನಿ ಐಡಿಎಫ್ ಅಧ್ಯಕ್ಷ ಉಮೇಶ ವಂದಿಸಿದರು.
ಕಾರ್ಯಕ್ರಮದಲ್ಲಿ ನಬಾರ್ಡ್‍ನ ತುಮಕೂರು ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಭ, ಐಡಿಎಫ್ ಸಂಸ್ಥೆಯ ಕೆಂಪೇಗೌಡ ಎಸ್.ಪಿ ಶ್ರೀಕಾಂತ್, ಮಲ್ಲಿಕಾರ್ಜುನ ಸೀತಾರಾಮಶೆಟ್ಟಿ, ಎಸ್.ಬಿ.ಪಾಟೀಲ್, ಕರುಣಾಕರ್, ಸಂಗಪ್ಪ, ಗುರುದತ್, ಭುವನೇಶ್ ಸೇರಿದಂತೆ ಇತರರು ಇದ್ದರು.
