ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ

ರಾಣಿಬೆನ್ನೂರ:

                ಮನುಷ್ಯನ ಜೀವನದಲ್ಲಿ ಪ್ರತಿಯೊಂದು ಸಮಸ್ಯಗಳಿಗೆ ಪರಿಹಾರ ಇದ್ದೇ ಇರುತ್ತದೆ,ಅವುಗಳ ನಿವಾರಣೆಗೆ ಜನಜಾಗೃತಿ ಬಹಳ ಅಶ್ಯವಾಗಿದೆ, ಅಂತಹ ಮಹತ್ಕಾರ್ಯಗಳನ್ನು ವಿವಿಧ ಸೇವಾ ಸಂಸ್ಥೆಗಳು ಮಾಡುತ್ತಿರುವುದು ಸಂತಷ ತಂದಿದೆ ಎಂದು ಸ್ಥಳೀಯ ರಾಮಕೃಷ್ಣ ಆಶ್ರಮದ ಸ್ವಾಮಿಜಿ ಪ್ರಕಾಶಾನಂದ ಮಹಾರಾಜ್ ಹೇಳಿದರು.
               ಶನಿವಾರ ನಗರದ ಓಂ ಹಾಸ್ಪಿಟಲ್‍ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ನಿಶಾರ್ಡ ಸೇವಾ ಸಂಸ್ಥೆ, ಸ್ಥಳಿಯ ಓಂ ಆಸ್ಪತ್ರೆ ಹಾಗೂ ಬೆಳಗಾವಿಯ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯಕ್ತ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
                ಭಗವಂತ ನೀಡಿದ ಈ ನರಜನ್ಮಕ್ಕೆ ತೊಂದರೆಯಾದಾಗ ವೈದ್ಯರು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ, ವೈದ್ಯ ನಾರಾಯಣ ಹರಿ ಎಂಬ ಯುಕ್ತಿಯಂತೆ, ಭಗವಂತನ ಕೃಪೆಯಿಂದ ವೈದ್ಯರು ಈ ಭೂಮಿಯಲ್ಲಿ ಜನ್ಮ ತಾಳಿ ಮನುಷ್ಯನ ಜೀವನದಲ್ಲಿ ಬಂದೊದಗಿದ ಸಂಕಷ್ಠಗಳಿಗೆ ಸ್ಪಂದಿಸುವ ಮೂಲಕ ಪರಮಾತ್ಮನ ಸ್ವರೂಪಿ ಎಂದು ನಂಬಿಕೆ ಇಡಬೇಕು ಎಂದು ನುಡಿದರು.
              ಆಹಾರ ವಿಜ್ಞಾನಿ ಡಾ. ಶ್ರೀಸೈಲ ಬಾದಾಮಿ ಮಾತನಾಡಿ, ಇಂದು ನಾವು ವಿಷ ಮಿಶ್ರಿತ ಆಹಾರ ಸೇವಿಸುವುದರಿಂದ ವಿವಿಧ ಖಾಯಿಲೆಗಳಿಂದ ಬಳಲುವಂತಾಗಿದೆ. ಸಾಧ್ಯವಾದಷ್ಷುಜವಾರಿ ತಳಿಗಳ ಧಾನ್ಯ ಮತ್ತು ತರಕಾರಿಗಳನ್ನು ಸೇವಿಸಬೇಕು, ಜಂಕ್ ಪುಡ್ ಪದಾರ್ಥವನ್ನು ಸೇವಿಸಲೇಬಾರದು ಇದರಿಂದ ಕ್ಯಾನ್ಸರ್ ಖಾಯಿಲೆ ತಗಲುವ ಸಾಧ್ಯತೆ ಹೆಚ್ಚಿದೆ, ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಬಾಕ್ಸ ಮತ್ತು ಪಾತ್ರೆಗಳಲ್ಲಿ ಇಡಬಾರದು ಇದು ಕೂಡಾ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರಲಿದೆ ಎಂದರು.
              ಡಾ| ಮನೋಜ ಸಾವುಕಾರ ಮಾತನಾಡಿ, ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.2.21 ರಷ್ಟು ಅಂಗವಿಕಲರಿದ್ದು ಭೌಗೋಳಿಕವಾಗಿ ಹೆಚ್ಚು ಹಳ್ಳಿಗಳಿಂದ ಕೂಡಿದ್ದು, ನಮ್ಮ ನಾಡಿನಲ್ಲಿ ಶೇ.65ಕ್ಕೂ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ಇದ್ದಾರೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 13.6 ಲಕ್ಷಕ್ಕಿಂತ ಹೆಚ್ಚು ಅಂಗವಿಕಲರಿದ್ದು, ಅದರಲ್ಲಿ ಸುಮಾರು 15,000 ಕ್ಕಿಂತ ಹೆಚ್ಚಿನ ಜನರು ಬೆನ್ನುಹುರಿ ಅಪಘಾತಕ್ಕೆ ಒಳಗಾಗಿರುವ ವ್ಯಕ್ತಿಗಳಿದ್ದಾರೆ ಎಂದರು.
                 ಬೆನ್ನುಹುರಿ ಅಪಘಾತವು ಎಲ್ಲಾ ಅಂಗವಿಕಲತೆಗಳಿಗಿಂತ ವಿಭಿನ್ನ ಮತ್ತು ಕ್ಲಿಷ್ಟಕರವಾದ ಅಂಗವಿಕಲತೆ ಆಗಿದೆ. ಬೆನ್ನುಹುರಿಯು ಮನುಷ್ಯನ ದೇಹದಲ್ಲಿ ಒಂದು ಬಹುಮುಖ್ಯವಾದ ಭಾಗವಾಗಿದ್ದು, ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳು ಬೆನ್ನುಹುರಿಯ ಮೂಲಕವೇ ನಡೆಯುತ್ತವೆ. ಆದರೆ ವಿವಿಧ ಕಾರಣಗಳಾದ ರಸ್ತೆ ಅಪಘಾತ, ಕಟ್ಟಡಗಳ ಮೇಲಿನಿಂದ ಕೆಳಕ್ಕೆ ಬಿದ್ದು, ಭಾರವಾದ ವಸ್ತುಗಳು ಬೆನ್ನಿನ ಮೇಲೆ ಬೀಳುವುದರಿಂದ, ಬೆನ್ನು ಮೂಳೆ ಕ್ಷಯ ಮತ್ತು ಬೆನ್ನುಹುರಿಯಲ್ಲಿ ಗಡ್ಡೆ ಗಳಾಗುವುದರಿಂದ ಬೆನ್ನುಹುರಿ ಅಪಘಾತಕ್ಕೆ ಒಳಗಾಗುತ್ತಾರೆ ಎಂದು ಸಾವುಕಾರ ಹೇಳಿದರು.
                  ಸಾವಯುವ ಕೃಷಿಕ ಚನ್ನಬಸಪ್ಪ ಕೊಂಬಳಿ ಮಾತನಾಡಿ, ಒಂದಾನೊಂದು ಕಾಲದಲ್ಲಿ ಸಿರಿ ಧಾನ್ಯಗಳಾದ ರಾಗಿ, ಸಜ್ಜೆ, ನವಣಿ, ಬರಗು, ಹಾರಕ, ಸಾವಿಯು ಬಡವರ ಆಹಾರ ಧಾನ್ಯಗಳಾಗಿದ್ದವು, ಇಂದು ಅವು ಶ್ರೀಮಂತರ ಆಹಾರ ಧಾನ್ಯಗಳಾಗಿವೆ, ಇಂದು ಇವು ಬಡವರಿಗೆ ಸಿಗದಂತಾಗಿ ಅವರ ಆರೋಗ್ಯ ಹದಗೆಡುತ್ತಿದೆ, ಆದಕಾರಣ ಪ್ರತಿಯೊಬ್ಬ ರೈತರೂ ಸಿರಿ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು, ಅಂದಾಗ ಮಾತ್ರ ಬಡವರಿಗೆ ಈ ಧಾನ್ಯಗಳು ಸುಲಭವಾಗಿ ದೊರೆಯಲು ಸಾಧ್ಯ ಎಂದರು.
                ನಿಶಾರ್ಡ ಸಂಸ್ಥೆಯ ಅಧ್ಯಕ್ಷೆ ರುಕ್ಮೀಣಿ ಸಾವುಕಾರ ಅಧ್ಯಕ್ಷತೆ ವಹಿಸಿದ್ದರು.ಐಎಂಎ ತಾಲೂಕಾ ಅಧ್ಯಕ್ಷೆ ಡಾ| ವಿದ್ಯಾ ವಾಸುದೇವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿಯ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆಯ ವ್ಯವಸ್ಥಾಪಕ ಬಾಬು ನೇಜಕರ್, ಡಾ| ವಾಸುದೇವಮೂರ್ತಿ, ಬೆಳಗಾವಿಯ ರಮೇಶ ದೊಂಗಡಿ, ಸಾವಯುವ ಧಾನ್ಯಗಳ ವ್ಯಾಪಾರಸ್ಥ ರಾಘವೇಂದ್ರ ಕೊಂಬಳಿ, ಎಸ್.ಜಿ.ಮುಂಡರಗಿ, ನಿಂಗಪ್ಪ ದೊಡ್ಮನಿ, ರೇಷ್ಮಾ ಸೇರಿದಂತೆ ಇತರರು ಇದ್ದರು.
ಇದಕ್ಕೂ ಮುನ್ನ ವಿಶ್ವ ಬೆನ್ನುಹುರಿ ಜನಜಾಗೃತಿಯ ಜಾಥಾವು ಇಲ್ಲಿನ ಓಂ ಆಸ್ಪತ್ರೆಯಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.