ಶಿಕ್ಷಕರಿಗೆ ಅಭಿನಂಧಿಸಿದ ಪೋಷಕರು-ವಿದ್ಯಾರ್ಥಿಗಳು

ಕುಣಿಗಲ್
                ತಾಲ್ಲೂಕಿನ ಅಮೃತೂರು ಹೋಬಳಿಯ ಪಡುವಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಾಲೆಗೆ ಆಗಮಿಸಿ 20 ವರ್ಷ ಒಂದೇ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಶಿಕ್ಷಕ ಬಿ.ಜೆ.ರಾಜು ಅವರಿಗೆ ಹೃದಯಪೂರ್ವಕವಾಗಿ ಸನ್ಮಾನಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಮತ್ತು ಪೋಷಕರು, ಎಸ್.ಡಿ.ಎಂ.ಸಿ.ಯವರು ಆಚರಿಸಿದ್ದಾರೆ.ಶಿಕ್ಷಕ ವೃತ್ತಿಗೆ ಬಿ.ಜೆ.ರಾಜು ಅವರು 1998 ರಿಂದ 2018 ವರೆಗೆ ಒಂದೇ ಶಾಲೆಯಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ ಗುರುಗಳಾಗಿದ್ದಾರೆ.
                    ಶಿಕ್ಷಕರ ಈ ಸುದೀರ್ಘ ಸೇವೆಯಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಬಿ.ಜೆ.ರಾಜು ಅವರಿಗೆ ಜನ ಮೆಚ್ಚಿದ ಶಿಕ್ಷಕ ಎಂಬ ಪ್ರಶಸ್ತಿ ಹಾಗೂ ಕಳೆದ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಪಡೆಯುವ ಮೂಲಕ ತಾಲ್ಲೂಕಿಗೆ ಹಾಗೂ ಗ್ರಾಮದ ಕೀರ್ತಿಗೆ ಪಾತ್ರರಾಗಿದ್ದಾರೆ.
                      ಈ ಶಿಕ್ಷಕರು ಪಡುವಗೆರೆ ಶಾಲೆಗೆ ಬಂದು 20 ವರ್ಷ ಸಂದ ಹಿನ್ನೆಲೆಯ ಸುದ್ದಿಯನ್ನು ತಿಳಿದ ಮಕ್ಕಳು ಮತ್ತು ಗ್ರಾಮದವರು ಮೆಚ್ಚಿನ ಶಿಕ್ಷಕರನ್ನ ಅಭಿನಂದಿಸಿ ಶುಕ್ರವಾರ ಹಬ್ಬದೋಪಾದಿಯಲ್ಲಿ ಶಾಲೆಯನ್ನು ಶೃಂಗರಿಸಿ ಸರಳ ರೀತಿಯಲ್ಲಿ ಎಲ್ಲರೂ ಸೇರಿ ಕಾರ್ಯಕ್ರಮನ್ನು ನಡೆಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
             ಶಿಕ್ಷಕ ರಿಂದ ಮಕ್ಕಳಿಗೆ ನೆನಪಿನ ಕಾಣಿಕೆ :- ಕಾರ್ಯಕ್ರಮದಲ್ಲಿ ಶಿಕ್ಷಕ ಬಿ.ಜೆ.ರಾಜು ಅವರು ತಮ್ಮ ವಿದ್ಯಾರ್ಥಿಗಳೆಲ್ಲರಿಗೂ ನೆನಪಿನ ಕಾಣಿಕೆಯಾಗಿ ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳನ್ನ ವಿತರಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ವಿವಿಧ ಸ್ಪರ್ಧೆಗಳನ್ನ ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಅಲ್ಲದೆ ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ ಸಿಹಿ ಊಟದ ವ್ಯವಸ್ಥೆಯನ್ನು ಸ್ವತಹ ಶಿಕ್ಷಕರೇ ಮಾಡಿಸಿದ್ದರು. ಇದೇ ಕಾರ್ಯಕ್ರಮದಲ್ಲಿ 3 ಬಾರಿ ಪರಿಸರ ಮಿತ್ರ ಪ್ರಶಸ್ತಿ ಪಡೆದಿರುವ ಈ ಶಾಲೆಯಲ್ಲಿ ಈ ಬಾರಿಯೂ ಮಕ್ಕಳಿಂದ ವಿವಿಧ ಬಗೆಯ ಸಸಿಗಳನ್ನ ಹಾಕಿಸುವ ಮೂಲಕ ಶಾಲೆಯ ಮತ್ತಷ್ಟು ಮೆರುಗನ್ನ ಹೆಚ್ಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಶಾಲಾ ಸಹ ಶಿಕ್ಷಕರು ಮತ್ತು ಪೋಷಕರು ಹಾಗೂ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ ದಾನಿಗಳು ಭಾಗವಹಿಸಿದ್ದರು.