ಸದನದಲ್ಲಿ ಸಂಖ್ಯಾಬಲ ಕಡಿಮೆ ಇದೆ ಎಂದು ಎದೆಗುಂದಬೇಡಿ : ದೇವೇಗೌಡ

ಬೆಂಗಳೂರು:

    ಸದನದಲ್ಲಿ ಸಂಖ್ಯಾಬಲ ಕಡಿಮೆ ಇದೆ ಎಂದು ಎದೆಗುಂದಬೇಕಾಗಿಲ್ಲ. ಹಿಂದಿನ ಲೋಕಸಭೆ ಯಲ್ಲಿಯೂ ಪಕ್ಷದ ಪರವಾಗಿ ಒಬ್ಬನೇ ಇದ್ದೆ. ಈಗಲೂ ನಮಗೆ ಒಬ್ಬರೇ ಸಂಸದರಿದ್ದಾರೆ. ಹಾಗಂತ ನಮ್ಮ ಹೋರಾಟದ ಕಿಚ್ಚು ಕಡಿಮೆಯಾಗಿದೆಯಾ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಆತ್ಮಸ್ಥೈರ್ಯ ತುಂಬಿದ್ದಾರೆ.

   ತಮ್ಮ ನಿವಾಸದಲ್ಲಿ ಕರೆದಿದ್ದ ಸಭೆಯಲ್ಲಿ ಪಕ್ಷದ ನೂತನ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, 19 ಸೀಟು ಗೆದ್ದಿದ್ದೇವೆ ಎಂಬ ಆತಂಕ ಬೇಡ. 119 ಸೀಟು ಗೆಲ್ಲುವ ದಿಕ್ಕಿನಲ್ಲಿ ಕೆಲಸ ಮಾಡೋಣ. ನಾನು ಬದುಕಿರುವ ತನಕ ಪಕ್ಷಕ್ಕಾಗಿ ದುಡಿಯುತ್ತೇನೆ. ನೀವು ಯಾರೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಬೆಂಬಲದ ಮಾತುಗಳನ್ನಾಡಿದರು.

 

    ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಂಡು ಜನತೆ ಜತೆ ನಿಂತು ಕೆಲಸ ಮಾಡೋಣ. ಪ್ರಾಮಾಣಿಕತೆ, ಬದ್ಧತೆ, ಅಚಲತೆಯಿಂದ ದುಡಿದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟವಲ್ಲ ಎಂದು ಕಿವಿಮಾತು ಹೇಳಿದರು. ನಾನು ಸಹ ಸೋಲು ಅನುಭವಿಸಿದ್ದೇನೆ. ಗೆದ್ದಿದ್ದೇನೆ. ಸೋತಾಗ ಹೆದರಿ ಮನೆ ಸೇರಿಕೊಂಡಿಲ್ಲ, ಗೆದ್ದಾಗ ಬೀಗಿಲ್ಲ.  ಎಲ್ಲಾ ಸಮಯದಲ್ಲೂ ಶ್ರದ್ಧೆ, ವಿನಯದಿಂದ ಜನರ ಕೆಲಸ ಮಾಡಿದ್ದೇನೆ. ಆಡಳಿತ ಪಕ್ಷದ ವಿರುದ್ಧ ಹೋರಾಟ ನಡೆಸಿದ್ದೇನೆ ಎಂದರು.

   1962ರಲ್ಲಿ ಪಕ್ಷೇತರ ಶಾಸಕನಾಗಿ ಗೆದ್ದುಬಂದು ಈ ನೆಲ ಜಲಕ್ಕಾಗಿ ಹೋರಾಟ ನಡೆಸಿದವನು ನಾನು. ಒಬ್ಬನೇ ಶಾಸಕ ಎಂದು ನಾನು ಕೈಕಟ್ಟಿ ಕೂತಿದ್ದರೆ ಕಾವೇರಿ ನೀರಿನ ಸದ್ಬಳಕೆ ಸಾಧ್ಯ ಆಗುತ್ತಿತ್ತಾ? ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ತಲೆ ಎತ್ತುತ್ತಿದ್ದವಾ? ಮನಸ್ಸಿಟ್ಟು ಯೋಚನೆ ಮಾಡಿ, ಅಧೈರ್ಯಪಟ್ಟರೆ ಉಪಯೋಗವಿಲ್ಲ. ನಿಮ್ಮ ಜೊತೆ ಕುಮಾರಸ್ವಾಮಿ ನಿಲ್ಲುತ್ತಾರೆ. ಹೋರಾಟ ಮಾಡಿ ಎಂದು ಕಿವಿಮಾತು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap