ಸರ್ಕಾರ ಹಾಲುಮತ ಕುರುಬರ ಅಭಿವೃದ್ದಿ ನಿಗಮ ಸ್ಥಾಪಿಸಲು ಆಗ್ರಹ

0
58

ಹಿರಿಯೂರು:

      ಆದಿವಾಸಿ ಬುಡಕಟ್ಟು ಸಂಸ್ಕತಿಯನ್ನೇ ಜೀವಾಳವಾಗಿಸಿಕೊಂಡು ಕುರಿ ಸಾಕಾಣಿಕೆ, ಕಂಬಳಿ ನೇಕಾರಿಕೆ ಮೂಲಕ ಜೀವನ ಸಾಗಿಸುತ್ತಿರುವ ಹಾಲುಮತ ಕುರುಬರು ಸರಕಾರದ ಸೌಲಭ್ಯಗಳಿಂದ ಸಾಕಷ್ಟು ವಂಚಿತರಾಗಿದ್ದು ಸಮುದಾಯದ ಉನ್ನತಿಗಾಗಿ ರಾಜ್ಯ ಸರಕಾರ “ಹಾಲುಮತ ಕುರುಬರ ಅಭಿವೃದ್ಧಿ ನಿಗಮ” ಸ್ಥಾಪಿಸಬೇಕು ಎಂದು ಹಾಲುಮತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಎಸ್. ಎಚ್. ಕಾಂತರಾಜ್‍ಹುಲಿ ಹಾಗೂ ಚಿತ್ರದುರ್ಗ ಜಿಲ್ಲಾ ಮಹಿಳಾ ಕುರುಬರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಬಿ.ಜೆ.ಶೃತಿಅರಸ್, ಬುಡಕಟ್ಟು ಹಾಲುಮತ ಕುರುಬರ ಒಕ್ಕೂಟದ ಮುಖಂಡ ಕೊಡಗು ನಾಗೇಶ್‍ಮೌರ್ಯ ಒತ್ತಾಯಿಸಿದ್ದಾರೆ.

      ಕುರುಬರು ತಳ ಸಮುದಾಯದಿಂದಲೇ ಬಂದವರು, ಶೋಷಿತರಾಗಿದ್ದು ಅನೇಕ ಕಡೆ ಇನ್ನೂ ಕುರುಬರ ಸ್ಥಿತಿ ಚಿಂತಾಜನಕವಾಗಿದೆ. ಇತ್ತಿಚೆಗೆ ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಜಲಪ್ರಳಯದಲ್ಲಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಇಲ್ಲಿನ ಜೇನು ಕುರುಬ, ಕಾಡುಕುರುಬರು ಪರಿಶಿಷ್ಟ ಪಂಗಡ ಎಸ್‍ಟಿಗೆ ಸೇರಿದ್ದರೂ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದ ಗೊಂಡ ಕುರುಬರ ಸ್ಥಿತಿಯೂ ಕಷ್ಟದಾಯಕವಾಗಿದ್ದು ದಶಕಗಳಿಂದ ಕುರುಬರನ್ನು ಎಸ್‍ಟಿಗೆ ಸೇರಿಸಿ ಎಂಬ ಹೋರಾಟ ಮಾಡುತ್ತಿದ್ದರೂ ನಮಗೆ ಇನ್ನೂ ನ್ಯಾಯದೊರೆತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

      ಸರ್ಕಾರ ಭೋವಿ, ಲಂಬಾಣಿ, ವಾಲ್ಮೀಕಿ, ಆದಿಜಾಂಬವ ಸೇರಿದಂತೆ ಅನೇಕರಿಗೆ ಅಭಿವೃದ್ದಿ ನಿಗಮ ಸ್ಥಾಪಿಸಿರುವಂತೆ ಕುರುಬರ ಅಭಿವೃದ್ದಿಗಾಗಿ ಸರ್ಕಾರ ಹಾಲುಮತ ಕುರುಬರ ಅಭಿವೃದ್ದಿ ನಿಗಮ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

      ಕಳೆದ ಹತ್ತು ಹನ್ನೆರಡು ವರ್ಷಗಳಿಂದಲೂ ಎಸ್‍ಟಿ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮೀಸಲಾತಿ ಕೊಡಿ ಎಂದು ಕೇಳುವ ಯುವಕರನ್ನ ಕಾಲಿಡಿದು ಎಳೆಯುವ ಕುತಂತ್ರವನ್ನು ಅನೇಕರು ಮಾಡುತ್ತಿದ್ದು ಈಗಲಾದರೂ ಈ ಕೆಲಸ ನಿಲ್ಲಿಸಿ, ಕುರುಬರ ಅಭಿವೃದ್ದಿಗೆ ಕೈಜೋಡಿಸಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮೀಸಲಾತಿಗಾಗಿ ಹಾಗೂ ಹಾಲುಮತ ಕುರುಬರ ಅಭಿವೃದ್ದಿ ನಿಗಮ ಸ್ಥಾಪನೆಗೆ ಹೋರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.

 ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯ:

       ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಕುರುಬರ ಶಕ್ತಿ ಕೇಂದ್ರ. ತಾಲೂಕಿನ ಹರ್ತಿಕೋಟೆ ಗ್ರಾಮದ ಶ್ರೀ ಜಗದ್ಗುರು ನಿರಂಜನಾನಂದ ಪುರಿ ಮಹಾಸ್ವಾಮಿಜಿ ಅವರು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾಗಿದ್ದು ನಮ್ಮ ತಾಲೂಕಿನ ಹೆಮ್ಮೆ. ಈ ದೆಸೆಯಲ್ಲಿ ಹಿರಿಯೂರು ನಗರದಲ್ಲಿ ಕನಕನ ಪ್ರತಿಮೆಯೂ ಇಲ್ಲ ಸಂಗೊಳ್ಳಿ ರಾಯಣ್ಣರ ಪ್ರತಿಮೆಯೂ ಇಲ್ಲ. ಹಿರಿಯೂರು ನಗರದ ತಾಲೂಕು ಕಚೇರಿ ಮುಂಭಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಇದಕ್ಕೆ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಬಿ.ಮಹಂತೇಶ್ ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗು ಪದಾಧಿಕಾರಿಗಳು ಸಮ್ಮತಿಸಿದ್ದು ಹಿರಿಯೂರು ಶಾಸಕರಾದ ಪೂರ್ಣೀಮಾಶ್ರೀನಿವಾಸ್ ಸಂಪೂರ್ಣ ಸಹಕಾರದೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಹಾಲುಮತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಎಸ್. ಎಚ್. ಕಾಂತರಾಜ್ ಹುಲಿ ತಿಳಿಸಿದ್ದಾರೆ.

ಕೊಡಗು ಕುರುಬರನ್ನು ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ.

       ಆದಿವಾಸಿ ಬುಡಕಟ್ಟು ಹಾಲುಮತ ಕುರುಬರ ಒಕ್ಕೂಟದ ಮುಖಂಡ ಕೊಡಗು ನಾಗೇಶ್ ಮೌರ್ಯ ಮಾತನಾಡಿ, ಕೊಡಗಿನ ಕುರುಬರಿಗೆ ಅನ್ಯಾಯವಾಗಿದೆ ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಗಳ ಒಕ್ಕೂಟದಲ್ಲಿ ಕೊಡಗಿನ ಕುರುಬ ಸಮುದಾಯವೂ ಒಂದು. ನಾವು ಮೂಲ ಆದಿವಾಸಿಗಳಾಗಿದ್ದು, ಕಾಡು ಕುರುಬ, ಜೇನು ಕುರುಬ, ಎರವ ಸೋಲಿಗ, ಮತ್ತು ಕುಡಿಯ ಬುಡಕಟ್ಟುಗಳ ಹಾಗೆ ಕುರುಬರು ಸಹ ಬುಡಕಟ್ಟುಗಳ ಗುಂಪು, ಆದರೆ ಸರಕಾರ ಕುಡಿಯ ಜನಾಂಗಕ್ಕೆ ಧಾನ್ಯ ಮತ್ತು ಮೊಟ್ಟೆ ಆಹಾರ ಪದಾರ್ಥಗಳನ್ನುಕೊಡುವ ಯೋಜನೆ ನೀಡುತ್ತಿದ್ದು ಅದೇ ರೀತಿ ಕುರುಬಸಮುದಾಯವೂ ಅತೀ ಸೂಕ್ಷ್ಮ ಬುಡಕಟ್ಟಾಗಿದೆ ಸರಕಾರ ಕೊಡಗು ಕುರುಬರನ್ನು ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ ನಮಗೆ ವಿಶೇಷ ನಿಗಮ ಸ್ಥಾಪಿಸಿ ಎಂದು ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here