ಮಂಡ್ಯ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಿಸಲು ತೋಡಿದ್ದ ಹಳ್ಳಕ್ಕೆ ಅತಿವೇಗದಿಂದ ಬಂದ ಸಾರಿಗೆ ಬಸ್ ಬಿದ್ದಿದೆ. ಘಟನೆಯಲ್ಲಿ ಬಸ್ ಜಖಂಗೊಂಡಿದ್ದು ಚಾಲಕ ಸೇರಿದಂತೆ ಪ್ರಮಾಣಿಕರು ಪ್ರಾಣಾಪಾಯ ದಿಂದ ಪಾರಾದ ಘಟನೆ ಮಳವಳ್ಳಿ ತಾಲ್ಲೂಕಿನ ಮಾರೇಹಳ್ಳಿ ಗ್ರಾಮದ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಬಸ್ ತಲಕಾಡು ಕಡೆಯಿಂದ ಮಳವಳ್ಳಿ ಕಡೆಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಬಸ್ ಸೇತುವೆ ನಿರ್ಮಾಣಕ್ಕೆ ತೆಗೆದಿದ್ದ ಹಳ್ಳಕ್ಕೆ ನುಗ್ಗಿದೆ. ಬಸ್ ಹಳ್ಳಕ್ಕೆ ಬೀಳುತ್ತಿದ್ದಂತೆ ಪಿಲ್ಲರ್‌ಗಳಿಗೆ ಹಾಕಿದ್ದ ಕಬ್ಬಿಣದ ಸಲಾಕೆಗಳು ಬಾಗಿವೆ. ಅದೃಷ್ಟವಶಾತ್ ಬಸ್ ನೇರವಾಗಿ ಹಳ್ಳಕ್ಕೆ ಇಳಿದಿದೆ.
ರಸ್ತೆ ಕಾಮಗಾರಿ ಮಾಡುವ ಸ್ಥಳದಲ್ಲಿ ರಸ್ತೆಕಾಮಗಾರಿ ನಡೆಯುತ್ತಿರುವ ಸೂಚನಾಫಲಕ ಹಾಕದೆ ಇರುವುದು ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಸುಧಾಕರ ಆರೋಪಿಸಿದ್ದಾರೆ.
ಇನ್ನೂ ಚಾಲಕ ಮಹದೇವಸ್ವಾಮಿ ಮಾತನಾಡಿ, ಕಾಮಗಾರಿ ಮಾಡುತ್ತಿರುವವರ ನಿರ್ಲಕ್ಷ್ಯತೆಯಿಂದ ಈ ಅನಾಹುತ ನಡೆದಿದ್ದು, ಯಾವುದೇ ಸೂಚನಾ ಫಲಕ ಹಾಕದೆ ಈ ಅನಾಹುತಕ್ಕೆ ಕಾರಣ ಎಂದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಅಪಘಾತದಲ್ಲಿ ಚಾಲಕನಿಗೆ ತೀವ್ರ ಗಾಯಗಳಾಗಿದೆ. ಕೆಲವು ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕ ಹಾಗೂ ಪ್ರಯಾಣಿಕರಿಗೆ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ