ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ

ಚಿತ್ರದುರ್ಗ:

      ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ತಿಂಗಳಿಗೆ ಹದಿನೆಂಟು ಸಾವಿರ ರೂ. ನಿಗಧಿಪಡಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಎ.ಐ.ಟಿ.ಯು.ಸಿ.ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ದೇಶದ ಪ್ರಧಾನಿ ನರೇಂದ್ರಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮನವಿ ಸಲ್ಲಿಸಲಾಯಿತು.

     ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಪಕ್ಷದ ಕಾರ್ಯಾಲಯದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೇಂದ್ರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

     ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಹತ್ತಾರು ವರ್ಷಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕನಿಷ್ಟ ವೇತನ, ಕೆಲಸದ ಭದ್ರತೆ, ಪಿಂಚಣಿ, ಇ.ಎಸ್.ಐ., ಭವಿಷ್ಯನಿಧಿ ಯಾವುದೆ ಸವಲತ್ತುಗಳಿಲ್ಲದೆ ದುಡಿಯುತ್ತಿದ್ದಾರೆ.2011 ರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಗೌರವಧನ ಹೆಚ್ಚಳ ಮಾಡಿರುವುದನ್ನು ಬಿಟ್ಟರೆ ಇದುವರೆವಿಗೂ ಯಾವುದೇ ಸರ್ಕಾರಗಳು ಗೌರವಧನ ಹೆಚ್ಚಿಸಿಲ್ಲ. ಕಾರ್ಯಕರ್ತೆಯರು ಮಾಸಿಕ ಮೂರು ಸಾವಿರ ರೂ., ಹಾಗೂ ಸಹಾಯಕಿಯರು 1500 ರೂ.ಗಳಿಗೆ ಕಳೆದ 9 ವರ್ಷಗಳಿಂದಲೂ ದುಡಿಯುತ್ತಿದ್ದಾರೆ.

        ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ.ಸರ್ಕಾರ ಕಳೆದ ನಾಲ್ಕುವರೆ ವರ್ಷಗಳಿಂದಲೂ ನಯಾಪೈಸೆಯನ್ನು ಅಧಿಕಗೊಳಿಸಿಲ್ಲ. ಅಕ್ಟೋಬರ್ 2018 ಕ್ಕೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಶೇ.50 ರಷ್ಟು ಹೆಚ್ಚಳ ಮಾಡಿ ಆದೇಶಿಸಿದೆ ಇನ್ನು ಜಾರಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

       ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ಆರು ಸಾವಿರ ರೂ. ಹಾಗೂ ಸಹಾಯಕಿಯರಿಗೆ ಮೂರು ಸಾವಿರ ರೂ.ಪಿಂಚಣಿ ಜಾರಿಯಾಗಬೇಕು. ಸೇವಾಹಿರಿತನದ ಆಧಾರದ ಮೇಲೆ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ವೇತನ ಹೆಚ್ಚಿಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್‍ನಲ್ಲಿ ಘೋಷಣೆ ಮಾಡಿರುವ ಗೌರವಧನವನ್ನು ಕೂಡಲೆ ಬಿಡುಗಡೆಗೊಳಿಸಿ ಇ.ಎಸ್.ಐ.ಮತ್ತು ಪಿ.ಎಫ್.ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಕಾಂ.ಜಮುನಾಬಾಯಿ, ಕಾಂ.ಭಾಗ್ಯಮ್ಮ, ಕಾಂ.ವಿನೋಧಮ್ಮ, ಕಾಂ.ರತ್ನಮ್ಮ, ಕಾಂ.ಗಣೇಶ್, ಕಾಂ.ಸತ್ಯಕೀರ್ತಿ, ಕಾಂ.ಸಾವಿತ್ರಮ್ಮ, ಕಾಂ.ರಾಧಮ್ಮ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link