ಅಂಗವಿಕಲನಿಗೆ ಕೆಲಸ, ಮೂಲದಾಖಲಾತಿ ಎರಡೂ ಇಲ್ಲ..!

ತುಮಕೂರು

ಜಿಲ್ಲೆಯ ತಿಪಟೂರು ತಾಲ್ಲೂಕಿನ ಗೆದ್ದಲಹಳ್ಳಿ ನಿವಾಸಿ ನಟರಾಜು ಎಂಬಾತನ ಮಗ ಜಿ.ಎನ್.ಸ್ವಾಮಿ ವಾಕ್ ಮತ್ತು ಶ್ರವಣದೋಷವುಳ್ಳ ವ್ಯಕ್ತಿ. ಈತನಿಗೆ ತನ್ನ ಕೈಯಿಂದ ದುಡಿದು ತಿನ್ನಬೇಕು ಎನ್ನುವ ಛಲ. ಯಾವುದಾದರೂ ಸಣ್ಣ ಕೆಲಸ ಸಿಕ್ಕರೆ ಸಾಕು ಜೀವನದ ಬಂಡಿ ಸಾಗಿಸಿಕೊಂಡು ಹೋಗಬಹುದೆಂಬ ನಿರೀಕ್ಷೆ. ಆದರೆ ಈತನ ಪಾಲಿಗೆ ಸರ್ಕಾರಿ ಅಧಿಕಾರಿಗಳೇ ವಿಲನ್‍ಗಳಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದೆ.

ಕುಟುಂಬದ ನಿರ್ವಹಣೆ ಮಾಡುವಲ್ಲಿ ತಾಯಿಯ ಪಾತ್ರ ಯಥೇಚ್ಛವಾಗಿತ್ತು. ತಂದೆ ಈಗಾಗಲೇ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇನ್ನೂ ತಾಯಿ ಶೋಭಾ ಹುಣಸೇಘಟ್ಟ ಗ್ರಾಮದ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದರಿಂದಲೇ ಜೀವನ ಸಾಗುತ್ತಿತ್ತು. ಆದರೆ ತಾಯಿಯ ಆಕಸ್ಮಿಕ ಮರಣದಿಂದ ಕುಟುಂಬಕ್ಕೆ ಇದ್ದ ಆಧಾರ ಇಲ್ಲದಂತಾಗಿದೆ.

ವಾಕ್ ಮತ್ತು ಶ್ರವಣದೋಷವುಳ್ಳ ಜಿ.ಎನ್.ಸ್ವಾಮಿ ಹುಟ್ಟಿನಿಂದಲೇ ಅಂಗವೈಫಲ್ಯದಿಂದ ಬಳಲುತ್ತಿದ್ದನಾದರೂ, ಹೇಗೋ ವಿದ್ಯಾಭ್ಯಾಸ ಪೂರ್ತಿ ಮಾಡಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುವಾಗ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಕರೆಯಲಾಗಿತ್ತು. ಅದರಂತೆ ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ಅಧಿಕಾರಿಗಳು ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡಿಸುವ ಭರವಸೆ ನೀಡಿ ದಾಖಲಾತಿಗಳನ್ನು ಪಡೆದಿದ್ದಾರೆ.

ಕೆಲಸಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲಾತಿಗಳನ್ನು ಒದಗಿಸಿ ವರ್ಷವಾದರೂ ಇಲ್ಲಿಯವರೆಗೆ ಕೆಲಸವೂ ಸಿಕ್ಕಿಲ್ಲ, ಮೂಲ ದಾಖಲೆಯೂ ಇಲ್ಲ. ದಾಖಲೆ ಕೇಳಲು ಹೋದರೆ ಅಧಿಕಾರಿಗಳು ದಾಖಲೆಗಳನ್ನು ನೀಡುತ್ತಿಲ್ಲ. ಬದಲಿಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಂದೆ ನಟರಾಜು ಆರೋಪ ಮಾಡಿದ್ದಾರೆ.

ಅನುಕಂಪದ ಆಧಾರದ ಹುದ್ದೆ ನೀಡಬೇಕೆಂದು ಗ್ರಂಥಾಲಯ ಪ್ರಾಧಿಕಾರ ಸಭಾ ನಿರ್ಣಯ ಕೈಗೊಂಡಿದ್ದು, ಕೆಲಸ ಕೊಡುವಂತೆ ಅನುಮೋದನೆಯೂ ಮಾಡಲಾಗಿತ್ತು. ಅಂದಿನ ಸಿಇಒ ಆಗಿದ್ದ ಕೆ.ಜಿ.ಶಾಂತಾರಾಂ ಕೂಡ ಅನುಮತಿ ನೀಡಿದ್ದರು. ಆದರೆ ಈಗ ಹುದ್ದೆಯೂ ಇಲ ದಾಖಲಾತಿಯೂ ಕೊಡುತ್ತಿಲ್ಲ. ಇದೇ ಅವಧಿಯಲ್ಲಿ ಕರೆದಿದ್ದ ಚಿತ್ರದುರ್ಗ ಗ್ರಂಥಾಲಯ ಮೇಲ್ವಿಚಾರಕರಿಗೆ ಹುದ್ದೆಯ ಆಯ್ಕೆ ಈಗಾಗಲೇ ನಡೆದಿದೆ. ಆದರೆ ಇಲ್ಲಿ ಮಾತ್ರ ಉದ್ಯೋಗ ಇಲ್ಲದಂತಾಗಿದೆ. ಇಲ್ಲಿ ಉದ್ದೇಶಪೂರ್ವಕವಾಗಿಯೇ ಕೆಲಸ ಕೊಡುತ್ತಿಲ್ಲ ಎಂಬುದು ನಟರಾಜುರವರ ಆರೋಪವಾಗಿದೆ.

ಹಳೆಯ ನೇಮಕಾತಿಯನ್ನೇ ಪೂರ್ಣಗೊಳಿಸದ ಅಧಿಕಾರಿ ವರ್ಗ ಮತ್ತೆ ಹೊಸದಾಗಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ್ದಾರೆ. ಈಗಲಾದರೂ ನನ್ನ ಮಗನಿಗೆ ಗ್ರಂಥಾಲಯ ಮೇಲ್ವಿಚಾರಕ ಹುದ್ದೆ ಕೊಟ್ಟರೆ ಹೇಗೋ ಬರುವ 7500 ರೂ.ಗಳ ವೇತನದಿಂದ ಅವನು ಜೀವನ ನಿರ್ವಹಣೆ ಮಾಡುತ್ತಾನೆ ಎಂಬ ಆಶಯವನ್ನು ತಂದೆ ನಟರಾಜು ವ್ಯಕ್ತ ಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link