ತಿಪಟೂರು
ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಬೀಗ ಒಡೆದು ಕಳ್ಳತನ ಮಾಡಿದ ಘಟನೆ ನಡೆದಿದ್ದು ಬೆಳಗಿನ ಜಾವ ಗಮನಕ್ಕೆ ಬಂದಿದೆ.
ನಗರದ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು ಲಾಕರನ್ನು ಕಲ್ಲಿನಿಂದ ಒಡೆಯಲು ಯತ್ನಿಸಿದ್ದಾರೆ. ಲಾಕರ್ ಓಪನ್ ಆಗದೆ ಇದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಕಳ್ಳರು ವಾಪಸ್ ಆಗಿದ್ದಾರೆ.ಕಳೆದ ತಿಂಗಳು ತಾಲ್ಲೂಕು ಕಚೇರಿಯ ಆವರಣದಲ್ಲಿದ್ದ ಗಂಧದ ಮರಗಳನ್ನು ಭದ್ರತಾ ಸಿಬ್ಬಂದಿ ಮತ್ತು ಸಿ.ಸಿ ಕ್ಯಾಮುರಾಗಳಿದ್ದರೂ ರಾತ್ರೋರಾತ್ರಿ ಧೈರ್ಯವಾಗಿ ಕಳ್ಳತನ ಮಾಡಿದ್ದ ಖದೀಮರನ್ನು ಹಿಡಿಯುವ ಹೊತ್ತಿಗೆ, ಈಗ ತಾಲ್ಲೂಕು ಕಚೆರಿಯ ಗೋಡೆ ಒಡೆದು ಕಳ್ಳರು ಒಳನುಗ್ಗಿ ಎಲ್ಲಾ ಬೀರುಗಳನ್ನು ಹೊಡೆದಿರುವುದನ್ನು ನೋಡಿದರೆ, ಇವರು ಯಾವುದೇ ದಾಖಲೆಗಳನ್ನು ಹುಡುಕಿಕೊಂಡು ಬಂದಿರುವಂತೆ ಹೊರನೋಟಕ್ಕೆ ಕಾಣುತ್ತಿದೆ. ಇನ್ನು ಇಲ್ಲೊಂದು ಸ್ವಾರಸ್ಯಕರ ವಿಷಯವೆಂದರೆ ಸಿ.ಸಿ.ಕ್ಯಾಮುರಾಗಳು ದುರಸ್ತಿಗೆ ಒಳಪಟ್ಟ 2 ದಿನಗಳಲ್ಲೆ ಕಳ್ಳತನವಾಗಿರುವುದು ಸಹ ಇದು ಇಲ್ಲಿನವರ ಕೈವಾಡವೆ ಇರಬಹುದೇನೊ ಎಂಬ ಅನುಮಾನ ಕಾಡುತ್ತಿದೆ.
ಇನ್ನು ಎಲ್ಲಾ ಸರಕಾರಿ ಕಚೇರಿಗಳಲ್ಲೂ ಭದ್ರತಾ ವಿಷಯಕ್ಕಾಗಿ ಮತ್ತು ಮುಖ್ಯವಾಗಿ ಭ್ರಷ್ಟಾಚಾರ ಮುಕ್ತವಾಗಿ ಎಲ್ಲಾ ಪಾರದರ್ಶಕವಾಗಿ ನಡೆಯಲಿ ಎಂದು ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಸಿ.ಸಿ.ಕ್ಯಾಮರಾಗಳನ್ನು ಹಾಕಿಸಿದೆ. ಆದರೆ ಬಹುಪಾಲು ಕಛೇರಿಗಳಲ್ಲಿ ಈ ಸಿ.ಸಿ.ಕ್ಯಾಮರಾಗಳು ಕಾರ್ಯನಿರ್ವಹಿಸದೆ ಯಾವಾಗಲು ಕೆಟ್ಟು ನಿಂತಿರುತ್ತವೆ. ಈ ರೀತಿ ಕೆಟ್ಟು ನಿಲ್ಲುವ ಕ್ಯಾಮರಾಗಳು ಕನಿಷ್ಠ ಗುಣಮಟ್ಟದವೂ ಅಲ್ಲ. ಅಧಿಕಾರಿಗಳೇ ಕೆಡಿಸುತ್ತಿದ್ದಾರೋ ಎಂಬ ಮಾತು ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುವುದಲ್ಲದೆ, ಖಾಸಗಿಯವರು ತಮ್ಮ ಕಚೆರಿ, ಅಂಗಡಿ ಮುಂಗಟ್ಟುಗಳಲ್ಲಿ ಹಾಕಿಸುವ ಸಿ.ಸಿ.ಕ್ಯಾಮರಾಗಳು ಏಕೆ ಬೇಗ ಹಾಳಾಗುವುದಿಲ್ಲ ಎಂದು ಸಹ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಈ ರೀತಿ ದಿನೆದಿನೆ ಕಳ್ಳತನವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಆರಕ್ಷಕರ ರಾತ್ರಿ ಬೀಟ್ ಹಾಕುವ ಪುಸ್ತಕವು ಬಹುತೇಕ ಸರ್ಕಾರಿ ಕಚೆರಿಗಳಲ್ಲಿ ಇರುತ್ತವೆ. ಇಂತಹ ಕಚೆರಿಗಳಲ್ಲೇ ಕಳ್ಳತನಗಳಾಗುತ್ತಿದ್ದರೆ ಇನ್ನು ಸಾಮಾನ್ಯ ಜನರ ಮನೆ, ಮಳಿಗೆಗಳ ಪಾಡೇನು ಎಂಬ ಆತಂಕ ಕಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
