ಬ್ಯಾಡಗಿ:
ಕೇವಲ ಆರ್ಥಿಕ ಸದೃಡತೆಗಾಗಿ ಅಥವಾ ಹಣಕಾಸಿನ ನೀರಿಕ್ಷೆಯೊಂದಿಗೆ ಪದವಿ ಗಳಿಸಲು ಹೋರಾಟ ನಡೆಸುವುದು ಸೂಕ್ತವಲ್ಲ, ಪಾಲಕರ ಇಂತಹ ಮನಸ್ಥಿತಿಗಳಿಂದ ಜ್ಞಾನ ನೀಡಬೇಕಾದ ಶಿಕ್ಷಣ ಸಂಸ್ಥೆಗಳು ಇತ್ತೀಚೆಗೆ ಹಣ ಗಳಿಸುವ ಉದ್ದಿಮೆಗಳಾಗುತ್ತಿರುವುದು ದುರಂತದ ಸಂಗತಿ ಎಂದು ಹಾವೇರಿ ಜಿ.ಹೆಚ್.ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಜಗದೀಶ ಹೊಸ್ಮನಿ ಖೇದ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಬಾಸೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮೊದಲಿಗಿಂತಲೂ ಇಂದು ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಿ ಅಭ್ಯಾಸದಲ್ಲಿ ತೊಡಗುತ್ತಿದ್ದಾರೆ ಇದರಿಂದ ಸಹಜವಾಗಿ ಅಂಕಗಳ ಗಳಿಕೆಯಲ್ಲಿ ಪೈಪೋಟಿ ಏರ್ಪಟ್ಟಿರುವುದನ್ನು ಸ್ವಾಗತಿಸುತ್ತೇನೆ, ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಜೊತೆಯಲ್ಲಿಯೇ ಹಣದ ಪೈಪೋಟಿಯೂ ಸಹ ಆರಂಭವಾಗಿದ್ದು, ಜ್ಞಾನ ನೀಡಬೇಕಾಗಿದ್ದ ಶಿಕ್ಷಣ ಸಂಸ್ಥೆಗಳು ಇಂದು ಹಣದ ದಾಹಗಳಾಗಿ ಪರಿವರ್ತನೆಯಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದರು.
ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿ:ಶಿಕ್ಷಣ ಸಂಸ್ಥೆಗಳು ಶಾಲೆಯಲ್ಲಿನ ಮಕ್ಕಳಿಗೆ ಸಂಸ್ಕತಿ, ಸಂಸ್ಕಾರ, ಪ್ರಾಪಂಚಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿಯಾದಲ್ಲಿ ಮಾತ್ರ ವಿದ್ಯಾರ್ಥಿಗಳು ಪಡೆದಂತಹ ಪದವಿಗಳಿಗೆ ಇನ್ನೂ ಹೆಚ್ಚಿನ ಮೆರಗು ಸಿಗಲಿದೆ, ಈ ನಿಟ್ಟಿನಲ್ಲಿ ಶಿಕ್ಷಣದ ನಂತರ ಒಳ್ಳೆಯ ಅವಕಾಶ ಗಳಿದ್ದು ಅವುಗಳನ್ನು ಪಡೆದುಕೊಂಡು ಸುಂದರ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ಸರ್ಕಾರಿ ಕಾಲೇಜುಗಳು ವರದಾನ:ಸರ್ಕಾರಿ ಶಾಲೆ ಕಾಲೇಜುಗಳೆಂದರೆ ಮೂಗು ಮುರಿಯುವಂತಹ ಮನಸ್ಥಿತಿಯಿಂದ ಪಾಲಕರು ಮೊದಲು ಹೊರಬರಬೇಕು, ಖಾಸಗಿ ಕಾಲೇಜುಗಳಿಗಿಂತಲೂ ಹೆಚ್ಚು ಮೂಲ ಸೌಕರ್ಯಗಳು ಸರ್ಕಾರಿ ಕಾಲೇಜು ಗಳಲ್ಲಿ ಲಭ್ಯವಿದೆ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಇಂತಹ ಸರ್ಕಾರಿ ಕಾಲೇಜುಗಳು ವರದಾನವಾಗಿದ್ದು, ಇಲ್ಲಿ ಸಿಗುವಂತಹ ಉಚಿತ ಶಿಕ್ಷಣವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಪ್ರಜ್ಞಾವಂತ ನಾಗರಿಕನಾಗಿ ಹೊರ ಹೊಮ್ಮುವಂತೆ ಕರೆ ನೀಡಿದರು.
ಗ್ರಾಮೀಣ ಪ್ರದೇಶಗಳಿಗೂ ತಲುಪಿದೆ: ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಂ.ಎಂ.ಪಾಟೀಲ ಮಾತನಾಡಿ, ಸರ್ಕಾರಗಳ ಇತ್ತೀಚಿನ ನೀತಿಗಳಿಂದ ಶೈಕ್ಷಣಿಕ ಪ್ರಗತಿಗೆ ಬಜೆಟ್‍ನಲ್ಲಿ ಉತ್ತಮ ಅನುದಾನ ಲಭ್ಯವಾಗುತ್ತಿದೆ, ಇದರಿಂದ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ಯಲಾಗುತ್ತಿದೆ, ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಶಿಕ್ಷಣ ದೊರೆಯುತ್ತಿದ್ದು ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ, ಅಷ್ಟೇ ಏಕೆ ಪ್ರತಿ 8 ಕೀ.ಮೀ.ವ್ಯಾಪ್ತಿಯಲ್ಲಿ ಪ್ರೌಢಶಾಲೆ, ಹೋಬಳಿ ಮಟ್ಟದಲ್ಲೊಂದು ಪದವಿ ಕಾಲೇಜು, ತಾಲೂಕಿಗೊಂದು ತಾಂತ್ರಿಕ ಮಹಾ ವಿದ್ಯಾಲಯ ಆರಂಭಿಸಿದೆ, ಆದರೆ ಅಭಿರುಚಿ ಕಳೆದುಕೊಂಡ ಪಾಲಕರು ಆಸಕ್ತಿ ತೋರದ ಕಾರಣ ಗ್ರಾಮೀಣ ಪ್ರದೇಶದ ಮಕ್ಕಳು ಖಾಸಗಿ ವಾಹನಗಳಲ್ಲಿ ಪಟ್ಟಣಕ್ಕೆ ಕಳುಹಿಸಿಕೊಡುತ್ತಿರುವುದು ಕಾಣ ಸಿಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ಹೆಚ್ಚಿಸಿದ ದೀಪಾ ದಿಡಗೂರ, ಶೃತಿ ಹುಲ್ಲಾಳ, ದೀಪಾ ಹಿರೇಮಠ, ಶೃತಿ ಹಿರಳ್ಳೇರ, ಅರ್ಪಿತಾ ಅಡಗಂಟಿ, ಸಂಗೀತಾ ಕಾಳಣ್ಣನವರ, ಚಂದ್ರಪ್ಪ ಬೊಮ್ಮನಹಳ್ಳಿ, ಮಾಲತೇಶ ತಲ್ಲೂರ ಸೇರಿದಂತೆ ಇನ್ನಿತರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕ್ರೀಡಾ ಸಂಚಾಲಕ ಹೆಚ್.ಎಂ.ವಾಲ್ಮೀಕಿ, ಸಾಂಸ್ಕತಿಕ ಸಂಚಾಲಕಿ ಪ್ರಿಯಾ ಕುಲಕರ್ಣಿ, ಐಕ್ಯೂಎಸಿ ಹಾಗೂ ಎನ್‍ಎಸ್‍ಎಸ್ ಸಂಚಾಲಕ ರಾಮಚಂದ್ರ ಹೆಗಡೆ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶೃತಿ ಸ್ವಾಗತಿಸಿದರು, ಅಕ್ಷತಾ ನಿರೂಪಿಸಿದರು, ಜ್ಯೋತಿ ನಾಗನಗೌಡ್ರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ