ದಾವಣಗೆರೆ :
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‍ರವರು ವಿಶ್ವದ ಮಹಾನ್ ಚಿಂತಕರಾಗಿದ್ದರು, ಕ್ರಿಯಾಶೀಲ ಸಾಮಾಜಿಕ ಪರಿವರ್ತಕರು, ಮಹಾನ್ ದಾರ್ಶನಿಕರು ಹಾಗೂ ಮಾನವತೆಯ ರಾಯಭಾರಿಯಾಗಿದ್ದರು ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹಾಗೂ ಕೆ.ಎಸ್.ಐ.ಸಿ. ಮಾಜಿ ಅಧ್ಯಕ್ಷ ಡಿ. ಬಸವರಾಜ ಅವರು ಅಂಬೇಡ್ಕರ್‍ರವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ನಗರದ ಎಂ.ಸಿ.ಸಿ. ‘ಎ’ ಬ್ಲಾಕ್‍ನಲ್ಲಿ ದಾವಣಗೆರೆ ಜಿಲ್ಲಾ ಯುವಕ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಡಾ|| ಬಿ.ಆರ್. ಅಂಬೇಡ್ಕರ್‍ರವರ 128ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್‍ರವರು ಶೋಷಿತರ ಬದುಕನ್ನು ಕಟ್ಟಿಕೊಡಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಶೋಷಿತರು ಎಂದರೆ ಕೇವಲ ದಲಿತವರ್ಗದವರಲ್ಲದೇ ಇಡೀ ಸಮಾಜದಲ್ಲಿ ತುಳಿತಕ್ಕೆ ಒಳಗಾದಂತಹ ಎಲ್ಲಾ ವರ್ಗದ ಜನರ ಧ್ವನಿಯಾಗಿ, ಸಮಾನತೆ, ಸಹೋದರತೆಗಾಗಿ ಮೇಲು-ಕೀಳು ಎಂಬ ಭಾವ ಇರಬಾರದು ಎಲ್ಲರೂ ಸಮಾನರಾಗಿ ಬದುಕು ನಡೆಸುವಂತಾಗಬೇಕು ಎಂದು ಪ್ರತಿಪಾದನೆ ಮಾಡಿದಂತ ಮಹಾನ್ ಮುತ್ಸದ್ಧಿ ನಾಯಕರು ಆಗಿದ್ದರು ಎಂದು ಸ್ಮರಿಸಿದರು.
ಅಂಬೇಡ್ಕರ್‍ರವರು ತಮ್ಮ ಜೀವಮಾನವಿಡಿ ಸಮಾನತೆ, ಸಾಮಾಜಿಕ ನ್ಯಾಯವನ್ನು ನೀಡಲು ಸಂಕಲ್ಪ ಮಾಡಿದಂತಹ ಶ್ರೇಷ್ಠ ನಾಯಕರಾಗಿದ್ದರು. ಅವರು ಜೀವನದಲ್ಲಿ ಬಹಳ ಕಷ್ಟ ನೋವುಂಡವರು ಇವತ್ತು ಮನುಷ್ಯ ಮನುಷ್ಯರನ್ನಾಗಿ ನೋಡುವಂತಹ ಚಿಂತನೆ ಯಾರಿಗಾದರೂ ಬಂದಿದೆ ಎಂದರೆ, ಅದು ಅಂಬೇಡ್ಕರ್‍ರವರ ತತ್ವ, ಆದರ್ಶಗಳಿಂದ ಸಮಾಜದಲ್ಲಿ ಎಲ್ಲಾ ವರ್ಗದ ಜನರು ಸಮಾನತೆಯಿಂದ ಬದುಕಬೇಕೆಂದು ಸ್ಮರಿಸಿದರು.
ಡಾ. ಅಂಬೇಡ್ಕರ್‍ರವರು ಜಾತ್ಯತೀತ, ಸಮಾಜವಾದ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಹೊಂದಿದ್ದರು ಎಂದು ತಿಳಿಸಿದರಲ್ಲದೇ, ಅಗಾಧ ಪಾಂಡಿತ್ಯವನ್ನು ಉಳ್ಳವರಾಗಿದ್ದರು ಹಾಗೂ ನಿರಂತರ ಅಧ್ಯಯನಶೀಲರಾಗಿದ್ದರು. ಆದುದರಿಂದಲೇ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದರು ಎಂದು ಸ್ಮರಿಸಿದರು.
ಡಾ. ಬಿ.ಆರ್. ಅಂಬೇಡ್ಕರ್‍ರವರ ಪಾಂಡಿತ್ಯವನ್ನು ಅರಿತು ವಿಶ್ವ ಸಂಸ್ಥೆ ಅವರು ಹುಟ್ಟಿದ ದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿದೆ. ಆದರೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಸಚಿವರಾದ ಅನಂತಕುಮಾರ್ ಹೆಗಡೆ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇಂತಹವರ ಬಗ್ಗೆ ದಲಿತರು, ಶೋಷಿತರು ಎಚ್ಚರದಿಂದರಲಿ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ತೇಜಸ್ವಿ ಸೂರ್ಯ ಅಂಬೇಡ್ಕರ್ ಪ್ರತಿಮೆಗಳನ್ನು ಪುಡಿ-ಪುಡಿ ಮಾಡುತ್ತೇವೆಂದು ಹೇಳುತ್ತಾರೆ. ಇದು ನರೇಂದ್ರ ಮೋದಿ ಸರ್ಕಾರದ ಆಡಳಿತದ ವೈಖರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಎನ್. ಚಂದ್ರು, ಮಹಮ್ಮದ್ ಅಲಿ, ಆಕಾಶ್, ಡಿ. ಶಿವಕುಮಾರ್, ಲಿಯಾಕತ್ ಅಲಿ, ಹೆಚ್. ಹರೀಶ್, ಮುರುಳಿ, ಮಾರುತಿ, ಮನೋಜ್, ಸಂದೀಪ್, ಸುಹಾಸ್, ಸೂರಜ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








