ಹುಳಿಯಾರು:
ಪ್ರವಾಸಿಗರನ್ನು ಸೆಳೆಯುತ್ತಿರುವ ಅಪ್ಪಾಸಾಬಿ ಅಣೆಕಟ್ಟೆ
ಹತ್ತನೆರಡು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆಗೆ ಬತ್ತಿ ಬರಡಾಗಿದ್ದ ಕೆರೆ-ಕಟ್ಟೆಗಳು ಮರುಜೀವ ಪಡೆದಿದೆ. ಹಲವು ವರ್ಷಗಳ ನಂತರ ಕೆರೆಗಳು ಕೋಡಿ ಬಿದ್ದು, ನಿಸರ್ಗ ಪ್ರಿಯರನ್ನು ಆಕರ್ಷಿಸುತ್ತಿವೆ. ಅದರಲ್ಲೂ ಕೆಲ ಅಣೆಕಟ್ಟೆಗಳಲ್ಲಿ ಜಲಪಾತಗಳು ಸೃಷ್ಟಿಯಾಗಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
ಹೌದು, ಹುಳಿಯಾರು ಸಮೀಪದ ಅಪ್ಪಾಸಾಬಿ ಅಣೆಕಟ್ಟೆಯೂ ಸಹ ದಶಕಗಳ ನಂತರ ಮೈದುಂಬಿ ಹರಿಯುತ್ತಿದೆ. ಅದರಲ್ಲೂ ಜಲಧಾರೆಯಂತೆ ಧುಮ್ಮಿಕ್ಕಿ ಹರಿಯುವ ಮೂಲಕ ಸುತ್ತಮುತ್ತಲ ಜನರ ಒಂದು ದಿನದ ಪ್ರವಾಸಿ ತಾಣವಾಗಿ ಪರಿವರ್ತನೆಗೊಂಡಿದೆ. ಕೆರೆಯ ಕೋಡಿ ನೀರು ಬಂಡೆಗಳ ಮೇಲೆ ಹರಿದು ಹೋಗುವಾಗ ಹಾಲ್ನೊರೆಯಂತೆ ಕಾಣುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.
ಸೆಲ್ಫಿಗೆ ಮುಗಿಬಿದ್ದ ಜನ :
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸಿ ನೀರಿನಲ್ಲಿ ಆಟವಾಡಿ ಸಂಭ್ರಮಿಸುತ್ತಿದ್ದಾರೆ. ಮಕ್ಕಳು, ಸ್ತ್ರೀಯರು ಜಲಪಾತದ ಬುಡದಲ್ಲಿ ಖುಷಿ ಪಡುತ್ತಿದ್ದು, ಯುವಕರು ಈಜು ಹೊಡೆದು ಖುಷಿ ಪಡುತ್ತಿದ್ದಾರೆ. ಅಲ್ಲದೆ ಜಲಧಾರೆಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ.
ನೆಂಟರನ್ನೂ ಕರೆದೊಯ್ದರು :
ಕೆಲವರಂತೂ ತರಹೇವಾರಿ ತಿಂಡಿಗಳನ್ನು ಮಾಡಿಕೊಂಡು ಕುಟುಂಬ ಸಮೇತ ಆಗಮಿಸಿ ನೀರಿನಲ್ಲಿ ಕುಣಿದು ಕುಪ್ಪಳಿಸಿ ಚುಮುಚುಮು ಚಳಿಯಲ್ಲಿ ಖಾರಖಾರವಾದ ತಿಂಡಿ ತಿಂದು ಮಸ್ತ್ ಮಜಾ ಮಾಡುತ್ತಿದ್ದಾರೆ. ಮನೆಗೆ ಬರುವ ನೆಂಟರಿಷ್ಟರನ್ನು ಅಣೆಯ ಬಳಿ ಕರೆತಂದು ನಮ್ಮೂರ ಪಿಕ್ನಿಕ್‍ಸ್ಪಾಟ್ ಹೇಗಿದೆ ನೋಡಿ ಎಂದು ಹೆಮ್ಮೆಯಿಂದ ತೋರಿಸುತ್ತಿದ್ದಾರೆ.
ಅಕಾಲಿಕ ಮಳೆ ಸೃಷ್ಠಿಸಿದ ಜಲಪಾತ :
ಒಟ್ಟಾರೆ ಅಕಾಲಿಕ ಮಳೆ ಜಲಪಾತ ಸೃಷ್ಠಿಸಿ ಹುಳಿಯಾರು ಭಾಗದವರಿಗೆ ಪ್ರವಾಸಿ ತಾಣ ನಿರ್ಮಿಸಿದೆ. ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಜಲವೂ ಕಲ್ಲುಕೋರೆಗಳ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ದೃಶ್ಯ ನಯನ ಮನೋಹರವಾಗಿಸಿದೆ. ಕೆರೆಯ ಸೌಂದರ್ಯದ ಸೊಬಗು ಸವಿಯುವ ಜೊತೆಗೆ ಪ್ರಕೃತಿ ಮಡಿಲಲ್ಲಿ ಮಿಂದೇಳುವಂತೆ ಮಾಡಿದೆ. ಈಗ ಹೇಮಾವತಿ ನೀರು ಸ್ಥಗಿತಗೊಂಡಿದ್ದು, ಮಳೆ ನೀರಿನಿಂದ ಅಣೆ ಹರಿಯುತ್ತಿದೆ. ಮಳೆ ಸಂಪೂರ್ಣ ನಿಂತಾಗ ಅಣೆಯ ಸೊಬಗೂ ಮರೆಯಾಗುತ್ತದೆ.
ಜಾಲಿ ಗಿಡಗಳು ಅಡ್ಡಿ :
ಅಣೆ ಒಳಗೆ ಮತ್ತು ಮುಂಭಾಗದಲ್ಲಿ ಬೆಳೆದಿರುವ ಜಾಲಿ ಮುಳ್ಳಿನ ಗಿಡಗಳು ಕೋಡಿಯಲ್ಲಿ ಸಂಭ್ರಮಿಸಲು ಬರುವ ಜನರಿಗೆ ಅಡ್ಡಿಯಾಗಿವೆ. ಅದರಲ್ಲೂ ಈಜಲು ಬರುವ ಯುವಕರಿಗೆ ಕಿರಿಕಿರಿಯಾಗಿದೆ. ಎಚ್ಚರ ತಪ್ಪಿದರೆ ಮೈಯೆಲ್ಲಾ ಮುಳ್ಳಿನಿಂದ ತರಚಿಸಿಕೊಳ್ಳುವ ಆತಂಕ ಎದುರಾಗಿದೆ. ಅಲ್ಲದೆ ಹುಳಿಯಾರು ಪಟ್ಟಣದಿಂದ ಈ ಅಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಹ ಹದಗೆಟಿದ್ದು, ವಾಹನ ಸವಾರರು ಎದ್ದುಬಿದ್ದು ಕೆಸರು ಸಿಡಿಸಿಕೊಂಡು ಓಡಾಡಬೇಕಿದೆ. ನಾಲ್ಕು ಚಕ್ರದ ವಾಹನಗಳು ಬಂದರಂತೂ ನರಕಯಾತನೆ ಅನುಭವಿಸಬೇಕಿದೆ. ಪಪಂ ಅಣೆಯ ಕೋಡಿ ಬಳಿ ಹಾಗೂ ರಸ್ತೆಯಲ್ಲಿ ಜಾಲಿ ಗಿಡಗಳನ್ನು ತೆರವು ಮಾಡುವ ಜೊತೆಗೆ ರಸ್ತೆ ದುರಸ್ತಿಗೆ ಮುಂದಾಗಿ ಪ್ರವಾಸಿಗರಿಗೆ ನೆರವಾಗಬೇಕಿದೆ.
ತಿಮ್ಲಾಪುರ ಕೆರೆ ಕೋಡಿ ಬಿದ್ದಾಗ ನೀರು ಸುವರ್ಣಮುಖಿ ಹಳ್ಳದ ಮೂಲಕ ಬೋರನಕಣಿವೆ ಜಲಾಶಯಕ್ಕೆ ಹರಿಯುತ್ತದೆ. ಹೀಗೆ ಹರಿಯುವ ನೀರನ್ನು ತಡೆದು ನಿಲ್ಲಿಸಿ ಇಲ್ಲಿನ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಐದಾರು ದಶಕಗಳ ಹಿಂದೆ ಸರ್ಕಾರದಿಂದ ಅಣೆ ಕಟ್ಟಲಾಯಿತು. ಈ ಅಣೆ ನಿರ್ಮಾಣದ ಗುತ್ತಿಗೆಯನ್ನು ಅಪ್ಪಾಸಾಬಿ ಎನ್ನುವವರು ತೆಗೆದುಕೊಂಡಿದ್ದರು. ಹಾಗಾಗಿ ಈ ಅಣೆಗೆ ಅಪ್ಪಾಸಾಬಿ ಕಟ್ಟಿದ ಅಣೆ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಇದು ಅಪ್ಪಾಸಾಬಿ ಅಣೆಯಾಗಿ ಜನಜನಿತಾವಾಗಿದೆ.
-ಎಚ್.ಬಿ.ಕಿರಣ್‍ಕುಮಾರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ