ಕುಣಿಗಲ್
ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ದೇವಪಟ್ಟಣ ಸಮೀಪ ಸ.ವೆ. 56ರ ಸೋಮೇಶ್ವರ ಕ್ರಷರ್‍ನಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದು ರಾತ್ರಿ ವೇಳೆ ಭಯಂಕರವಾಗಿ ಬಂಡೆ ಸಿಡಿಸುತ್ತಾರೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ದಾಳಿ ಮಾಡಿ ಸುಮಾರು 850 ಕೆ.ಜಿ. ಸ್ಫೋಟಕ ಮತ್ತು ಅದಕ್ಕೆ ಬಳಸುವ ಸಾಮಗ್ರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಕಳೆದ ಬುಧವಾರ ಕ್ರಷರ್‍ನಲ್ಲಿ ಬಂಡೆ ಸಿಡಿಸಿದ್ದ ತೀವ್ರತೆಗೆ ಮೆಣಸಗೆರೆ ದೊಡ್ಡಿ ಗ್ರಾಮದ ಸಾಕಮ್ಮ ಎಂಬುವರಿಗೆ ಸೇರಿದ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಈ ಘಟನೆಯಿಂದ ವಿಚಲಿತರಾದ ಸಾಕಮ್ಮ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಪಡೆದ ಹುಲಿಯೂರುದುರ್ಗ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿ ಗುರುವಾರ ಬೆಳಿಗ್ಗೆ ದಿಢೀರ್ ಕ್ರಷರ್ ಮೇಲೆ ದಾಳಿ ಮಾಡಿದಾಗ 872 ಕೆ.ಜಿ.ಯ ಭಾರಿ ಸ್ಫೋಟಕಗಳು ಪತ್ತೆಯಾದವು.
ಕಲ್ಲು ಗಣಿಗಾರಿಕೆ ಮಾಡಲು ಸ್ವಾಮಿಗೌಡ ಎಂಬ ವ್ಯಕ್ತಿ ಪರವಾನಿಗೆ ಪಡೆದಿದ್ದು, ಯಾವುದೇ ಸ್ಫೋಟಕಗಳನ್ನು ಸಂಗ್ರಹಿಸಲು ಮತ್ತು ಸ್ಫೋಟಿಸಲು ಪರವಾನಿಗೆ ಪಡೆದಿಲ್ಲ. ಅನಧಿಕೃತವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದೇವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣಿಗಾರಿಕೆಯಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಸ್ಫೋಟಕಗಳನ್ನು ಸಂಗ್ರಹಿಸಿದ್ದ ಕ್ರಷರ್ ಮುಂದೆ ಮಲಗಿ ರಾತ್ರಿಯಿಡೀ ಚಲನವಲನಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸಹಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ