ನಿಂದನೆಗೆ ಆಯುಕ್ತರ ಕಿಡಿ, ಕ್ಷಮೆ ಕೋರಿದ ವ್ಯಕ್ತಿ
ತುಮಕೂರು
ಕ್ರಮಬದ್ಧವಾಗಿಲ್ಲದ ಮಹಿಳಾ ಪಿ.ಜಿ. ವಿರುದ್ಧ ಕ್ರಮ ಜರುಗಿಸಲು ಮುಂದಾದ ತುಮಕೂರು ಮಹಾನಗರ ಪಾಲಿಕೆಯ ಕ್ರಮಕ್ಕೆ ಪಿ.ಜಿ. ಮಾಲೀಕ ಅಡ್ಡಿಪಡಿಸಿದ್ದಲ್ಲದೆ, ಪಾಲಿಕೆ ಆಯುಕ್ತರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಬರಹ ಬರೆದಿದ್ದು, ಇದರಿಂದ ಆಕ್ರೋಶಗೊಂಡ ಆಯುಕ್ತರು, ಪೊಲೀಸ್ ದೂರು ನೀಡಲು ಮುಂದಾದ ಹಾಗೂ ಆ ಹೊತ್ತಿಗೆ ಸದರಿ ವ್ಯಕ್ತಿ ಕ್ಷಮಾಪಣಾ ಪತ್ರ ಬರೆದುಕೊಟ್ಟ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಆಯುಕ್ತರು ದೂರನ್ನು ಕೈಬಿಟ್ಟ ಬಿಸಿ-ಬಿಸಿ ಪ್ರಸಂಗ ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ಅಪರಾಹ್ನ ನಡೆಯಿತು.
ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರ ಕೊಠಡಿಯಲ್ಲೇ ಇವೆಲ್ಲ ಬೆಳವಣಿಗೆಗಳು ನಡೆದು, ಅನೇಕ ಅಧಿಕಾರಿಗಳು ಹಾಗೂ ಇತರರು ಸಾಕ್ಷಿಯಾದರು. ತುಮಕೂರು ನಗರದ ಗಾಂಧಿನಗರದ ಮಹಾಲಕ್ಷ್ಮೀ ಲೇಡೀಸ್ ಪಿ.ಜಿ.ಗೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಅಂಟಿಸಿರುವುದರ ವಿರುದ್ಧ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡು, ದಂಡ ವಿಧಿಸಿದ್ದೇ ಇವೆಲ್ಲ ಬೆಳವಣಿಗೆಗಳಿಗೆ ಕಾರಣವಾಯಿತು.
ಈ ಘಟನೆಗೆ ಸಂಬಂಧಿಸಿದಂತೆ ಸದರಿ ಪಿ.ಜಿ. ಮಾಲೀಕ ಪ್ರಕಾಶ್ ಎಂಬುವವರು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿದ್ದು ವಿವಾದಕ್ಕೆ ಎಡೆಮಾಡಿತು. “ಇವನ್ಯಾರಿ ಇವನು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ, ಸ್ಮಾರ್ಟ್‍ಸಿಟಿ ಅಂತ ಇಲ್ಲದೆ ಇರೋ ರೂಲ್ಸ್ ತಂದು ನೆಮ್ಮದಿಯಾಗಿ ದುಡಿದುಕೊಂಡು ತಿನ್ನುವವರ ಹೊಟ್ಟೆ ಮೇಲೆ ಹೊಡೀತಾ ಇದಾನೆ” ಎಂದು ಬರೆದಿರುವುದು ವೈರಲ್ ಆಯಿತು.
ಇವೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಮಗ್ರವಾಗಿ ಪರಿಶೀಲಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಆಯುಕ್ತರ ಸೂಚನೆ ಅನುಸಾರ ಅಧಿಕಾರಿಗಳು ಸದರಿ ಪಿ.ಜಿ.ಗೆ ಭೇಟಿ ಕೊಟ್ಟು ಕಟ್ಟಡ ಅಳತೆ ಇತ್ಯಾದಿ ಪರಿಶೀಲನೆಗೆ ತೊಡಗಿದಾಗ, ಇವರ ಕಾರ್ಯಕ್ಕೆ ಪಿ.ಜಿ. ಮಾಲೀಕರು ಪ್ರಭಾವಿ ವ್ಯಕ್ತಿಗಳಿಂದ ಫೋನ್ ಮಾಡಿಸಿ ತಡೆಯೊಡ್ಡಲು ಯತ್ನಿಸಿದ್ದಾರೆನ್ನಲಾಗಿದೆ.
ಆದರೂ ಅಧಿಕಾರಿಗಳು ಪರಿಶೀಲನೆ ಮಾಡಿದಾಗ, ಸದರಿ ಪಿ.ಜಿ. ಇರುವ ಕಟ್ಟಡವನ್ನು ಕಟ್ಟಡದ ಮಾಲೀಕರು ವಾಣಿಜ್ಯೋದ್ದೇಶಕ್ಕೆ ಪರಿವರ್ತಿಸದಿರುವುದು ಕಂಡುಬಂದಿದೆ. ಆ ಕಟ್ಟಡದಲ್ಲಿ ಬಾಡಿಗೆಗೆ ಇರುವ ಪಿ.ಜಿ.ಗೆ ಪರವಾನಗಿ ಇಲ್ಲದಿರುವುದು, ಪಿ.ಜಿ.ಯಲ್ಲಿರುವ ಮಹಿಳೆಯರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವುದು (ಗಾರ್ಡ್, ವಾರ್ಡನ್ ಇತ್ಯಾದಿ) ಕಂಡುಬಂದಿದೆ.
ವಿಶೇಷವಾಗಿ ಇದು ಮಹಿಳಾ ಪಿ.ಜಿ. ಆಗಿರುವುದರಿಂದ ವಿಷಂiÀiವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಟಿ.ಭೂಪಾಲನ್, ಕಟ್ಟಡ ಮಾಲೀಕರು ಮತ್ತು ಪಿ.ಜಿ. ಮಾಲೀಕರನ್ನು ಪಾಲಿಕೆ ಕಚೇರಿಗೆ ಮಂಗಳವಾರ ಬೆಳಗ್ಗೆ ಚರ್ಚೆಗೆ ಆಹ್ವಾನಿಸಿದ್ದರು. ಪಾಲಿಕೆ ಅಧಿಕಾರಿಗಳೂ ಇದ್ದರು. ಅಲ್ಲಿ ಇವೆಲ್ಲ ವಿಷಯಗಳು ಚರ್ಚೆಗೆ ಬಂದಾಗ ಭಾರಿ ವಾಗ್ವಾದ ನಡೆಯಿತು. ಒಂದು ಹಂತದಲ್ಲಿ ಆಯುಕ್ತರು “ಪ್ರಭಾವಿಗಳ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳನ್ನು ಹೆದರಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಲಾಗಿದೆಯಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಏಕವಚನದಲ್ಲಿ ನಿಂದಿಸಲಾಗಿದೆ.
ಹೀಗಾಗಿ ಪೊಲೀಸರಿಗೆ ದೂರು ಕೊಡುತ್ತೇನೆ’’ ಎಂದರು. “ವಾಟ್ಸಾಪ್ ಹಾಗೂ ಫೇಸ್ ಬುಕ್ ಸ್ಟೇಟಸ್ ಅನ್ನು ನಾನು ಬರೆದಿಲ್ಲ. ಬಿಜೆಪಿ ಮುಖಂಡ ಹನುಮಂತರಾಜು ಬರೆದಿದ್ದು” ಎಂದು ಪ್ರಕಾಶ್ ಹೇಳಿದ್ದಾರೆ. ಆಗ ಅಲ್ಲಿಗೆ ಹನುಮಂತರಾಜುರನ್ನು ಕರೆಸಿ ವಿಚಾರಿಸಿದಾಗ, ಅವರು ತಾನು ಬರೆದಿಲ್ಲ. ನೀವೇ ಬರೆದುಕೊಳ್ಳಿ ಎಂದು ಹೇಳಿದ್ದಾಗಿ ತಿಳಿಸಿದರು. ಇವೆಲ್ಲದರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಮತ್ತೆ ಚರ್ಚೆ ಮುಂದುವರೆಯಿತು. ಕೊನೆಗೆ ಪಿ.ಜಿ. ಮಾಲೀಕರು ಆಯುಕ್ತರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟ ಹಿನ್ನೆಲೆಯಲ್ಲಿ, ಮಾನವೀಯ ದೃಷ್ಟಿಯಿಂದ ಆಯುಕ್ತರು ದೂರು ಸಲ್ಲಿಕೆ ನಿರ್ಧಾರವನ್ನು ಕೈಬಿಟ್ಟರೆಂದು ಪ್ರತ್ಯಕ್ಷದರ್ಶಿ ಮೂಲಗಳಿಂದ ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ