ಬೆಂಗಳೂರು:
ನಗರ ಪ್ರದೇಶಗಳಲ್ಲಿರುವ ಆಸ್ತಿಗಳ ನೋಂದಣಿ ವೇಳೆ ನಡೆಯುವ ಅಕ್ರಮಗಳನ್ನು ತಪ್ಪಿಸಲು ನಗರಾಭಿವೃದ್ಧಿ ಇಲಾಖೆ ಮತ್ತು ನೋಂದಣಿ – ಮುದ್ರಾಂಕ ಇಲಾಖೆಗಳ ತಂತ್ರಾಂಶಗಳ ಜತೆ ಸಂಪರ್ಕ ಕಲ್ಪಿಸುವುದಾಗಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ ತಂತ್ರಾಂಶವನ್ನು ನಿರ್ವಹಣೆ ಮಾಡುತ್ತಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಇ-ಖಾತಾ ತಂತ್ರಾಂಶ ಅಸ್ತಿತ್ವದಲ್ಲಿದೆ. ಆಸ್ತಿಯ ಬಗ್ಗೆ ತಾಳೆ ನೋಡಲು ಈ ಎರಡು ತಂತ್ರಾಂಶಗಳ ನಡುವೆ ಸಂಪರ್ಕ ಇಲ್ಲ. ಹೀಗಾಗಿ ಆಸ್ತಿ ಖರೀದಿ ಮಾಡುವವರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ರಿಯಲ್‍ಎಸ್ಟೇಟ್ ವ್ಯವಹಾರ ಮಾಡುವವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಎರಡೂ ತಂತ್ರಾಂಶಗಳನ್ನು ಜೋಡಿಸಲು ಉದ್ದೇಶಿಸಲಾಗಿದೆ ಎಂದರು.
ಆಸ್ತಿ ನೋಂದಣಿಗಾಗಿ ಉಪನೋಂದಣಿ ಕಚೇರಿಗೆ ಅರ್ಜಿ ಸಲ್ಲಿಸಿದಾಕ್ಷಣ ಇ-ಖಾತೆ ಸಾಫ್ಟ್‍ವೇರ್ ಮೂಲಕ ನೋಂದಣಿ ಮಾಡುವ ಆಸ್ತಿ ಯಾರ ಹೆಸರಿನಲ್ಲಿದೆ. ಈ ಹಿಂದೆ ಯಾವ ರೀತಿ ಪರಭಾರೆ ಆಗಿದೆ ಎಂಬೆಲ್ಲಾ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ನಕಲಿ ದಾಖಲೆಗಳ ಮೂಲಕ ಆಸ್ತಿ ಪರಬಾರೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.ಇನ್ನು ಮನೆ ನಿರ್ಮಾಣ ಪರವಾನಗಿ, ಬಡಾವಣೆ ಮಂಜೂರಾತಿ ಸೇರಿದಂತೆ ನಿರ್ಮಾಣ ಕಾರ್ಯಗಳಿಗೆ ಅರ್ಜಿ ಸಲ್ಲಿಸಿದಾಗ ಆ ಆಸ್ತಿ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ ಎಂಬ ಸ್ಪಷ್ಟ ಮಾಹಿತಿ ಕಾವೇರಿ ಸಾಫ್ಟವೇರ್ ಮೂಲಕ ಅರ್ಜಿ ದಾರರಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಸುಮಾರು 14 ವಿವಿಧ ಇಲಾಖೆಗಳು, ಕಚೇರಿಗಳಿಂದ ಅನುಮತಿ ಪಡೆಯಬೇಕಿದೆ. ಇದನ್ನು ತಪ್ಪಿಸಲು ಏಕಗವಾಕ್ಷಿ ಪದ್ದತಿ ಯೋಜನೆ ಜಾರಿಗೆ ತರಲಾಗುತ್ತಿದ್ದು, 24 ಜಿಲ್ಲೆಗಳಲ್ಲಿ ಈಗಾಗಲೇ ಇದರ ಕಾರ್ಯಾರಂಭವಾಗಿದೆ ಎಂದು ಖಾದರ್ ಹೇಳಿದರು.
ರಾಜೀವ್‍ಗಾಂಧಿ ವಸತಿ ನಿಗಮದ ಫಲಾನುಭವಿಗಳ ನೆರವಿಗಾಗಿ ಬರುವ ಸೆ. 1 ರಂದು ಸ್ಪಂದನ ಸಹಾಯವಾಣಿಯನ್ನು ಆರಂಭಿಸಲಾಗುತ್ತಿದೆ. ಫಲಾನುಭವಿಗಳು ತಮಗೆ ಆಗಿರುವ ತೊಂದರೆ ಸೇರಿದಂತೆ ವಸತಿ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಈ ಸಹಾಯವಾಣಿಯಲ್ಲಿ ತಮ್ಮ ಎಲ್ಲ ರೀತಿಯ ದೂರುಗಳನ್ನು ದಾಖಲಿಸಲು ಅವಕಾಶವಿದೆ. ಬೆಂಗಳೂರಿನ ಕಾವೇರಿ ಭವನದಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸಲಿದ್ದು, ಸಹಾಯವಾಣಿ ಸಂಖ್ಯೆ 23118888 ಆಗಿದೆ ಎಂದರು.
ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ರಸ್ತೆಗಳು ಭೂಕುಸಿತದಿಂದಾಗಿ ಹಾಳಾಗಿರುವುದನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಕಂಪೆನಿಗಳು ಮಂಗಳೂರು-ಬೆಂಗಳೂರು ವಿಮಾನ ಪ್ರಯಾಣ ದರವನ್ನು ಯದ್ವಾತದ್ವಾ ಮಾಡಿರುವ ಏರಿಕೆಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಕೇಂದ್ರದ ವಿಮಾನಯಾನ ಇಲಾಖೆಗೆ ಪತ್ರ ಬರೆಸುವುದಾಗಿಯೂ ಸಚಿವ ಯು.ಟಿ. ಖಾದರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ