ತುಮಕೂರು
ಜುಂಜಪ್ಪನನ್ನು ಕುರಿತು ಗದ್ಯ ಮತ್ತು ಪದ್ಯ ಎರಡರಲ್ಲಿಯೂ ಮಹಾ ಕಾವ್ಯ ಹಾಡುತ್ತಿದ್ದ ಕರ್ನಾಟಕದ ಮೇಲು ಪಂಕ್ತಿಯ ಮಹಾಕಾವ್ಯ ಹಾಡುಗಾರ ಮದಲೂರು ದಾಸರಹಳ್ಳಿಯ ದಾಸಪ್ಪ ಬುಧವಾರ ನಿಧನರಾಗಿದ್ದಾರೆ. ದಾಸಪ್ಪ ಅವರ ಸಾವಿನ ಸುದ್ದಿ ತಿಳಿಯುತ್ತಲೇ ವಿವಿಧ ವಿಶ್ವವಿದ್ಯಾನಿಲಯಗಳ ಜಾನಪದ ವಿದ್ವಾಂಸರು ದಾಸಪ್ಪ ಅವರ ಸಾಂಸ್ಕತಿಕ ನಾಯಕತ್ವವನ್ನು ಸ್ಮರಿಸಿ ನಮನ ಸಲ್ಲಿಸಿದರು. ದಾಸಪ್ಪನವರು ಗಣೆ ಮತ್ತು ಹಾಡುಗಾರಿಕೆ ಎರಡೂ ಪ್ರಕಾರಗಳಲ್ಲಿಯೂ ಕಲಾವಿದರಾಗಿದ್ದರು.
ಭಾರತದ ಸಾಂಸ್ಕತಿಕ ವಿನಿಮಯ ಯೋಜನೆಯ ಅಡಿಯಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಜನಪದ ಕಾರ್ಯಕ್ರಮಗಳಲ್ಲಿ ಜುಂಜಪ್ಪನ ಕುರಿತ ಸಂವಾದ ಕಾವ್ಯ ಹಾಡುಗಾರರಾಗಿ ಪ್ರಸಿದ್ಧರಾಗಿದ್ದರು. ಇವರು ಹಾಡಿರುವ ವೀರ ಜುಂಜಪ್ಪ ಸಮಗ್ರ ಕಥಾವಳಿಯನ್ನು ಜಾನಪದ ವಿದ್ವಾಂಸ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಈ ಕೃತಿ ಜಾಲತಾಣಗಳಿಗೂ ಒಳಗಾಗಿದ್ದು, ವಿಶ್ವದಾದ್ಯಂತ ಓದುಗರನ್ನು ಪಡೆದ ಹಿರಿಮೆಗೂ ಪಾತ್ರವಾದ ಜನಪದ ಏಕೈಕ ಮಹಾ ಕಾವ್ಯ ಇದಾಗಿದೆ.
ದೇಶಾದ್ಯಂತ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯ, ಉಪಪಠ್ಯ, ಪರಾಮರ್ಶಾ ಗ್ರಂಥವಾಗಿಯೂ ಈ ಕೃತಿ ಬಳಕೆಯಾಗುತ್ತಿರುವುದು ವಿಶೇಷ. ಸಿರಾ ಸಮೀಪದ ಮದಲೂರು ದಾಸರಹಳ್ಳಿಯ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ದಾಸಪ್ಪ ದೆಹಲಿ, ಕೇರಳದ ಕೊಟ್ಟಾಯಂ, ಮಧುರೈ, ಉಸ್ಮಾನಿಯಾ, ಅನಂತಪುರ, ದ್ರಾವಿಡ ವಿಶ್ವವಿದ್ಯಾನಿಲಯಗಳು ಸೇರಿದಂತೆ ಹಂಪಿ ಉತ್ಸವ, ದಸರಾ ಉತ್ಸವಗಳಲ್ಲಿಯೂ ಭಾಗವಹಿಸಿ ಬುಡಕಟ್ಟು ಕಾವ್ಯ ಹಾಡಿದ್ದು ಇವರ ವಿಶೇಷ. 84 ವರ್ಷ ವಯಸ್ಸಿನ ದಾಸಪ್ಪ ಅವರಿಗೆ ಪತ್ನಿ ಕೆಂಚಮ್ಮ, ಒಬ್ಬ ಮಗ ಸೇರಿದಂತೆ ನಾಲ್ವರು ಪುತ್ರಿಯರಿದ್ದಾರೆ. ಬುಡಕಟ್ಟು ಗೋತ್ರದ ದಳವಾಯಿ ಆಗಿಯೂ ಮಾನ್ಯತೆ ಪಡೆದಿದ್ದ ಈ ಅಪೂರ್ವ ಕಲಾವಿದರ ನಿಧನ ಸಾವಿರಾರು ಜಾನಪದ ಆಸಕ್ತ ಅಭಿಮಾನಿಗಳಿಗೆ ಭರಿಸಲಾರದ ದುಃಖವಾಗಿದೆ ಎಂದು ಇವರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಸೇರಿದಂತೆ ಹಲವು ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ.