ಬೆಂಗಳೂರು

ಆನ್ಲೈನ್ ಅಗ್ರಿಗೇಟರ್ ಕಂಪನಿಗಳ ವಸೂಲಿಗೆ ಪ್ರಯಾಣಿಕರು ಹೈರಾಣಾಗಿದ್ದಾರೆ. ಈ ವಿಚಾರ ಗೊತ್ತಿದ್ದರೂ, ಸಾರಿಗೆ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದೆ. ರಾಜ್ಯದಲ್ಲಿ ಮುಂದಿನ ಆರು ವಾರದೊಳಗೆ ಬೈಕ್ ಟ್ಯಾಕ್ಸಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ಏಪ್ರಿಲ್ 2ರಂದು ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಓಲಾ, ಊಬರ್ ಮತ್ತು ನಮ್ಮ ಯಾತ್ರಿಯಂತಹ ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುತ್ತಿವೆ. ಆನ್ಲೈನ್ ಸಂಸ್ಥೆಗಳು ಆಟೋ ಪ್ರಯಾಣ ದರವನ್ನು ಒನ್ಟು ತ್ರಿಬಲ್ ಪಡೆಯುತ್ತಿದ್ದರೂ ಸಾರಿಗೆ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಿಯಮದ ಪ್ರಕಾರ ಮೊದಲ ಎರಡು ಕಿಲೋ ಮೀಟರ್ 30 ರೂ. ಪಡೆಯಬೇಕು. ನಂತರ ಪ್ರತೀ ಕಿಲೋ ಮೀಟರ್ಗೆ 15 ರೂಪಾಯಿ ಪಡೆಯಬೇಕು. ಉದಾಹರಣೆಗೆ, ಸೌಂತ್ ಎಂಡ್ ಟು ಯಡಿಯೂರು ಕೆರೆ (657 ಮೀಟರ್) ದೂರದ ಪ್ರಯಾಣಕ್ಕೆ ನಿಮಯದ ಪ್ರಕಾರ 30 ರೂ. ಪಡೆಯಬೇಕು. ಆದರೆ, 55 ರೂಪಾಯಿ ಪಡೆಯಲಾಗುತ್ತಿದೆ. ಮೆಜೆಸ್ಟಿಕ್ನಿಂದ ರಾಜಾಜಿನಗರ (3.71 ಕಿ.ಮೀ) ದೂರದ ಪ್ರಯಾಣಕ್ಕೆ ನಿಯಮದ ಪ್ರಕಾರ 50-60 ರೂಪಾಯಿ ಪಡೆಯಬೇಕು. ಆದರೆ, 93 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸೌತ್ ಎಂಡ್ ಸರ್ಕಲ್ನಿಂದ ಮೆಜೆಸ್ಟಿಕ್ಗೆ (6.4 ಕಿ.ಮೀ) ದೂರದ ಪ್ರಯಾಣಕ್ಕೆ ನಿಯಮದ ಪ್ರಕಾರ 90-100 ರೂಪಾಯಿ ಪಡೆಯಬೇಕು ಆದರೆ, 125 ರೂಪಾಯಿ ಪಡೆಯಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ಮಾತನಾಡಿ, ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಒಟ್ಟಿನಲ್ಲಿ ಸಾರಿಗೆ ಇಲಾಖೆ, ಮೋಟಾರ್ ವೆಹಿಕಲ್ ಕಾಯ್ದೆಯ ನಿಯಮವನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿರುವ ಅಗ್ರಿಗೇಟರ್ ಕಂಪನಿಗಳ ವಸೂಲಿಗೆ ಸಾರಿಗೆ ಇಲಾಖೆ ಬ್ರೇಕ್ ಹಾಕಲೇ ಬೇಕಿದೆ.
